ಶತಕ ಗಳಿಸಿದ ಸಚಿವ: ಸೆಮಿಗೆ ಬಂಗಾಳ ಬೆಂಗಳೂರು: 88 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯೊಂದಕ್ಕೆ ಬಂಗಾಳದ ಮನೋಜ್ ತಿವಾರಿ ಭಾಜನರಾದರು. ಪಶ್ಚಿಮ ಬಂಗಾಳದ ಹಾಲಿ ಕ್ರೀಡಾ ಮಂತ್ರಿಯಾಗಿ ಟೂರ್ನಿಯ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇಲ್ಲಿನ ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ ಶುಕ್ರವಾರ ಕೊನೆಗೊಂಡ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಡ್ರಾ ಮಾಡಿಕೊಂಡ ಬಂಗಾಳ ತಂಡವು, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಬಂಗಾಳ ತಂಡದ ಎರಡನೇ ಇನಿಂಗ್ಸ್‌ನಲ್ಲಿ 136 ರನ್‌ ಗಳಿಸಿದ ಮನೋಜ್‌, 19 ಬೌಂಡರಿ ಎರಡು ಸಿಕ್ಸರ್ ಸಿಡಿಸಿದರು. ಮೊದಲ ಇನಿಂಗ್ಸ್‌ನಲ್ಲಿಯೂ 73 ರನ್‌ಗಳ ಕೊಡುಗೆ ನೀಡಿದ್ದರು. ಬಂಗಾಳ ತಂಡವು ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶ ಎದುರು ಸೆಣಸಲಿದೆ. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಮುಂಬೈ ಮತ್ತು ಉತ್ತರಪ್ರದೇಶ ಮುಖಾಮುಖಿಯಾಗಲಿವೆ. ಇವೆರಡೂ ಪಂದ್ಯಗಳು ಇದೇ 14ರಂದು ಬೆಂಗಳೂರಿನಲ್ಲಿ ನಡೆಯಲಿವೆ. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಂಗಾಳ: 218.4 ಓವರ್‌ಗಳಲ್ಲಿ 7ಕ್ಕೆ 773 ಡಿಕ್ಲೇರ್‌: ಜಾರ್ಖಂಡ್‌: 96 ಓವರ್‌ಗಳಲ್ಲಿ 298; ಎರಡನೇ ಇನಿಂಗ್ಸ್: ಬಂಗಾಳ: 85.1 ಓವರ್‌ಗಳಲ್ಲಿ 7ಕ್ಕೆ 318 ಡಿಕ್ಲೇರ್‌ (ಮನೋಜ್ ತಿವಾರಿ 136, ಶಾಬಾಜ್ ಅಹಮದ್‌ 46, ಅಭಿಷೇಕ್ ಪೊರೆಲ್ 34; ಶಾಬಾಜ್ ನದೀಮ್‌ 59ಕ್ಕೆ 5). ಫಲಿತಾಂಶ: ಪಂದ್ಯ ಡ್ರಾ, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಬಂಗಾಳ ತಂಡ ಸೆಮಿಫೈನಲ್‌ಗೆ ಪ್ರವೇಶ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.