ರಣಜಿ ಕ್ರಿಕೆಟ್ 10ರಿಂದ ಆರಂಭ ನವದೆಹಲಿ (ಪಿಟಿಐ): ಬಹುನಿರೀಕ್ಷಿತ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಹಂತವನ್ನು ಇದೇ 10ರಿಂದ ಮಾರ್ಚ್‌ 15ರವರೆಗೆ ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ. ‘ಮೊದಲ ಹಂತದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆ. ಅದಾದ ಬಳಿಕ ಮೇ 30ರಿಂದ ಜೂನ್ 26 ರವರೆಗೆ ಎರಡನೇ ಹಂತದಲ್ಲಿ ರಣಜಿ ಟೂರ್ನಿಯನ್ನು ಸಂಘಟಿಸಲಾಗುವುದು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಇದೊಂದು ಚುಟುಕು ಅವಧಿಯ ಪ್ರಥಮ ದರ್ಜೆ ಟೂರ್ನಿಯಾಗಲಿದೆ. ಲೀಗ್ ಹಂತದಲ್ಲಿ ಪ್ರತಿ ತಂಡವೂ ಮೂರು ಪಂದ್ಯಗಳಲ್ಲಿ ಮಾತ್ರ ಆಡಲಿದೆ. ಇದರಿಂದಾಗಿ ಸಂಭಾವನೆ ಹೆಚ್ಚಳದ ಲಾಭವು ಆಟಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದು ಸಂಶಯ. ಹೊಸ ವೇತನ ನಿಯಮದಲ್ಲಿ 40ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಅನುಭವಿಗಳಿಗೆ ದಿನವೊಂದಕ್ಕೆ ₹ 60ಸಾವಿರ ಲಭಿಸಲಿದೆ. ಈ ಹಿಂದೆ ₹ 35 ಸಾವಿರ ಕೊಡಲಾಗುತ್ತಿತ್ತು. 21 ರಿಂದ 40 ಪಂದ್ಯ ಆಡಿದವರಿಗೆ ದಿನವೊಂದಕ್ಕೆ ₹ 50 ಸಾವಿರ ನೀಡಲಾಗುತ್ತದೆ. ಈ ಮೊದಲು ವರದಿ ಮಾಡಿದ್ದಂತೆ ಎಲೀಟ್‌ ವಿಭಾಗದಲ್ಲಿ ಎಂಟು ಗುಂಪುಗಳು ಮತ್ತು ಪ್ಲೇಟ್‌ನಲ್ಲಿ ಆರು ಗುಂಪುಗಳನ್ನು ವಿಂಗಡಿಸಲಾಗಿತ್ತು. ಇದೀಗ ಮೊದಲ ಹಂತದಲ್ಲಿ 57 ಮತ್ತು ಎರಡನೇ ಹಂತದಲ್ಲಿ ನಾಕ್‌ಔಟ್ ಪಂದ್ಯಗಳೂ ಸೇರಿ ಏಳು ಪಂದ್ಯಗಳು ನಡೆಯಲಿವೆ. ಎಲೀಟ್ ಗುಂಪಿನ ಪಂದ್ಯಗಳು ರಾಜ್‌ಕೋಟ್, ಕಟಕ್, ಚೆನ್ನೈ, ಅಹಮದಾಬಾದ್, ತಿರುವನಂತಪುರ, ದೆಹಲಿ, ಹರಿಯಾಣ ಮತ್ತು ಗುವಾಹಟಿ, ಪ್ಲೇಟ್‌ ಗುಂಪಿನ ಪಂದ್ಯಗಳು ಕೋಲ್ಕತ್ತದಲ್ಲಿ ನಡೆಯಲಿವೆ. ಈ ಒಂಬತ್ತು ತಾಣಗಳಲ್ಲಿಯೂ ಬಯೋಬಬಲ್ ವ್ಯವಸ್ಥೆಯಲ್ಲಿ ತಂಡಗಳು ಆಡಲಿವೆ. ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ 2020–21ರಲ್ಲಿ ರಣಜಿ ಟ್ರೋಫಿ ಟೂರ್ನಿಯನ್ನು ರದ್ದುಮಾಡಲಾಗಿತ್ತು. ಹೋದ ತಿಂಗಳು 13ರಂದು ಟೂರ್ನಿಯನ್ನು ಆರಂಭಿಸಲು ಯೋಜಿಸಲಾಗಿತ್ತು. ಆದರೆ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ ಕಾರಣ ಮುಂದೂಡಲಾಗಿತ್ತು. ಫೆ 16ರಿಂದ ಆರಂಭಿಸುವುದಾಗಿ ಈಚೆಗೆ ಪ್ರಕಟಿಸಲಾಗಿತ್ತು. ಇದೀಗ ಮತ್ತೆ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಹಾಲಿ ಚಾಂಪಿಯನ್ ಸೌರಾಷ್ಟ್ರ ತಂಡವು ಡಿ ಗುಂಪಿನಲ್ಲಿ ಆಡಲಿದೆ. ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿವೆ. ಈ ಗುಂಪಿನಲ್ಲಿ ಮುಂಬೈ, ಒಡಿಶಾ, ಗೋವಾ ತಂಡಗಳಿವೆ. ಬೆಂಗಳೂರಿನಲ್ಲಿ ನಾಕ್‌ಔಟ್? ಟೂರ್ನಿಯ ಎರಡನೇ ಹಂತದಲ್ಲಿ ನಡೆಯುವ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸುವ ಸಾಧ್ಯತೆ ಇದೆ. ‘ಗುಂಪು ಹಂತದಲ್ಲಿ ಬೆಂಗಳೂರಿನಲ್ಲಿ ಪಂದ್ಯಗಳಿಲ್ಲ. ನಾಕ್ಔಟ್ ಹಂತದಲ್ಲಿ ಪಂದ್ಯಗಳನ್ನು ನಡೆಸುವ ಅವಕಾಶ ಸಿಗಲಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಖಜಾಂಚಿ ವಿನಯ್ ಮೃತ್ಯುಂಜಯ ಪ್ರಜಾವಾಣಿಗೆ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.