ಟಿ20 ವಿಶ್ವಕಪ್ ಗೆಲ್ಲುವ ಪ್ರಬಲ ಅವಕಾಶ ಭಾರತಕ್ಕಿದೆ: ದಿನೇಶ್ ಕಾರ್ತಿಕ್ ಮುಂಬೈ: 'ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ–20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಪ್ರಬಲ ಅವಕಾಶ ನಮ್ಮ ಮುಂದಿದೆ' ಎಂದು ಭಾರತ ಕ್ರಿಕೆಟ್‌ ತಂಡದ ಅನುಭವಿ ವಿಕೆಟ್‌ ಕೀಪರ್‌ ದಿನೇಶ್ ಕಾರ್ತಿಕ್‌ ಮಂಗಳವಾರ ಹೇಳಿದ್ದಾರೆ. 'ಕ್ರಿಕೆಟ್‌ನ ಶಿಸ್ತಿನ ವಿದ್ಯಾರ್ಥಿಯಾಗಿರುವ ನಾನು ಭಾರತದ ಜೆರ್ಸಿಯಲ್ಲಿ ಮತ್ತೊಮ್ಮೆ ನನ್ನ ಪಾತ್ರ ನಿಭಾಯಿಸಲು ಇಷ್ಟಪಡುತ್ತೇನೆ' ಎಂದೂ ಹೇಳಿಕೊಂಡಿದ್ದಾರೆ. 2004ರಲ್ಲಿ ಭಾರತ ತಂಡದ ಪರ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕಾರ್ತಿಕ್‌, 2006ರಲ್ಲಿ ಮೊದಲ ಸಲ ಟೀಂ ಇಂಡಿಯಾ ಪರ ಚುಟುಕು ಕ್ರಿಕೆಟ್‌ ಪಂದ್ಯ ಆಡಿದ್ದರು. ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ ಆಗಿ ಭರವಸೆ ಮೂಡಿಸಿದ್ದರು. ಸದ್ಯ ಐಪಿಎಲ್‌–2022ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಪರ ವಿಕೆಟ್‌ಕೀಪರ್‌ ಬ್ಯಾಟರ್‌ ಆಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 13 ಪಂದ್ಯಗಳಿಂದ57ರ ಸರಾಸರಿಯಲ್ಲಿ285 ರನ್‌ ಕಲೆಹಾಕಿದ್ದಾರೆ. 192.56 ಸ್ಟ್ರೈಕ್‌ರೇಟ್‌ನೊಂದಿಗೆ 'ಫಿನಿಶರ್‌' ಪಾತ್ರ ನಿಭಾಯಿಸುತ್ತಿದ್ದು, ಕೆಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಹೀಗಾಗಿ ಈ ಬಾರಿ ವಿಶ್ವಕಪ್‌ನಲ್ಲಿ ಆಡಲು ಆಸ್ಟ್ರೇಲಿಯಾಗೆ ತೆರಳುವ ಭಾರತ ತಂಡದಲ್ಲಿ ಅವರಿಗೆ ಸ್ಥಾನ ಸಿಗಬೇಕು ಎನ್ನುವ ಅಭಿಪ್ರಾಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.