ಪಿ.ವಿ.ಸಿಂಧು ಕ್ಷಮೆಯಾಚಿಸಿದ ಬ್ಯಾಡ್ಮಿಂಟನ್ ಏಷ್ಯಾ ನವದೆಹಲಿ: ಏಪ್ರಿಲ್‌ನಲ್ಲಿ ನಡೆದಿದ್ದ ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ರೆಫರಿಯಿಂದ ಲೋಪ ಆಗಿರುವುದಕ್ಕೆ ಬ್ಯಾಡ್ಮಿಂಟನ್‌ ಏಷ್ಯಾದ ತಾಂತ್ರಿಕ ಸಮಿತಿಯು ಭಾರತದ ಆಟಗಾರ್ತಿ ಪಿ.ವಿ.ಸಿಂಧು ಅವರ ಕ್ಷಮೆಯಾಚಿಸಿದೆ. ‘ನಿಮಗೆ ಆಗಿರುವ ತೊಂದರೆಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇದು ಕ್ರೀಡೆಯ ಒಂದು ಭಾಗವಾಗಿದೆ ಮತ್ತು ನೀವು ಕೂಡಾ ಕ್ರೀಡಾ ಮನೋಭಾವದಿಂದಲೇ ಅದನ್ನು ಸ್ವೀಕರಿಸಿರುವುದಾಗಿ ನಾವು ನಂಬಿದ್ದೇವೆ’ ಎಂದು ತಾಂತ್ರಿಕ ಸಮಿತಿಯ ಮುಖ್ಯಸ್ಥ ಚಿ ಶೆನ್ ಚೆನ್‌ ಅವರು ಸಿಂಧುಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ‘ಅಂದು ಆಗಿರುವ ತಪ್ಪನ್ನುಈಗ ಸರಿಪಡಿಸಲು ಆಗದು. ಅಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ‘ ಎಂದು ಹೇಳಿದ್ದಾರೆ. ಜಪಾನ್‌ನ ಅಕಾನೆ ಯಮಗುಚಿ ಎದುರಿನ ಪಂದ್ಯದಲ್ಲಿ ಮೊದಲ ಗೇಮ್‌ ಗೆದ್ದುಕೊಂಡಿದ್ದ ಸಿಂಧು, ಎರಡನೇ ಗೇಮ್‌ನಲ್ಲಿ 14–11 ರಲ್ಲಿ ಮುನ್ನಡೆಯಲ್ಲಿದ್ದಾಗ ಈ ಘಟನೆ ನಡೆದಿತ್ತು. ಸರ್ವ್‌ ಮಾಡಲು ಸಿಂಧು ನಿಗದಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ಅಂಪೈರ್‌ ಪೆನಾಲ್ಟಿ ನೀಡಿದ್ದರು. ಎದುರಾಳಿಗೆ ಒಂದು ಹೆಚ್ಚುವರಿ ಪಾಯಿಂಟ್ ಕೊಟ್ಟಿದ್ದರು. ಅಂಪೈರ್ ತೀರ್ಮಾನ ವಿರೋಧಿಸಿ ಸಿಂಧು ರೆಫರಿ ಜತೆ ವಾದ ಮಾಡಿದ್ದರು. ಬಳಿಕ ಆಟದ ಮೇಲಿನ ಏಕಾಗ್ರತೆ ಕಳೆದುಕೊಂಡು 21-13, 19-21, 16-21 ರಲ್ಲಿ ಸೋತಿದ್ದರು. ‘ಅಂಪೈರ್‌ಗಳ ತಪ್ಪು ನಿರ್ಧಾರದಿಂದ ಸೋಲಾಗಿದೆ’ ಎಂದು ಸಿಂಧು, ಪಂದ್ಯದ ಬಳಿಕ ಕಣ್ಣೀರು ಹಾಕಿದ್ದರು. ಕ್ಷಮೆಯಾಚನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಧು ಅವರ ತಂದೆ ಪಿ.ವಿ.ರಮಣ, ‘ಅವರು ತಪ್ಪನ್ನು ಒಪ್ಪಿಕೊಂಡಿರುವುದಕ್ಕೆ ನನಗೆ ಸಂತಸವಾಗಿದೆ. ಮುಂದೆ ಪಂದ್ಯದ ವೇಳೆ ಇಂತಹದೇ ಪರಿಸ್ಥಿತಿ ಎದುರಾದರೆ, ಅಂಪೈರ್‌ ಮತ್ತು ರೆಫರಿ ವಿಡಿಯೊ ವೀಕ್ಷಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂಬುದು ನನ್ನ ಕೋರಿಕೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.