ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ: ಫೈನಲ್‌ಗೆ ಗುಲ್ಬರ್ಗ ಮಿಸ್ಟಿಕ್ಸ್‌ ಬೆಂಗಳೂರು: ದೇವದತ್ತ ಪಡಿಕ್ಕಲ್‌ (ಅಜೇಯ 96) ಅವರ ಅಮೋಘ ಆಟದ ಬಲದಿಂದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪ್ರವೇಶಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಗುರುವಾರ ರಾತ್ರಿ ನಡೆದ ಎರಡನೇ ಕ್ವಾಲಿಫೈಯರ್‌ನಲ್ಲಿ ಗುಲ್ಬರ್ಗ ತಂಡ ಆರು ವಿಕೆಟ್‌ಗಳಿಂದಮೈಸೂರು ವಾರಿಯರ್ಸ್‌ ತಂಡವನ್ನು ಮಣಿಸಿತು. ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಗುಲ್ಬರ್ಗ ತಂಡ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಪೈಪೋಟಿ ನಡೆಸಲಿದೆ. ಮೊದಲು ಬ್ಯಾಟ್‌ ಮಾಡಿದ ಮೈಸೂರು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 157 ರನ್ ಗಳಿಸಿದರೆ, ಗುಲ್ಬರ್ಗ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 158 ರನ್‌ ಗಳಿಸಿ ಜಯ ಸಾಧಿಸಿತು. 64 ಎಸೆತಗಳಲ್ಲಿ 8 ಬೌಂಡರಿ ಮತ್ತು ಐದು ಸಿಕ್ಸರ್‌ ನೆರವಿನಿಂದ ಅಜೇಯ 96 ರನ್‌ ಗಳಿಸಿದ ಪಡಿಕ್ಕಲ್‌ ಅವರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮನೋಜ್‌ ಭಾಂಡಗೆ (ಅಜೇಯ 35) ಜತೆ ಮುರಿಯದ ಐದನೇ ವಿಕೆಟ್‌ಗೆ 80 ರನ್ ಸೇರಿಸಿ ತಂಡದ ಜಯದ ಹಾದಿ ಸುಗಮಗೊಳಿಸಿದರು. ಕರುಣ್‌, ಪವನ್‌ ಆಸರೆ: ಇದಕ್ಕೂ ಮುನ್ನ ಟಾಸ್ ಗೆದ್ದ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ನಾಯಕ ಮನೀಷ್ ಪಾಂಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಕರುಣ್ (42; 32ಎ) ಹಾಗೂ ಪವನ್ (38; 42ಎ) ಅವರು ಮೈಸೂರು ತಂಡಕ್ಕೆ ಆಸರೆಯಾದರು. ನಿಹಾಲ್ ಉಲ್ಲಾಳ (14 ರನ್) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ ಕರುಣ್ 27 ರನ್‌ ಸೇರಿಸಿದರು. ಪ್ರಣವ್ ಭಾಟಿಯಾ ಎಸೆತದಲ್ಲಿ ನಿಹಾಲ್ ಔಟಾದರು. ಇದರಿಂದ ಉಂಟಾದ ಆತಂಕವನ್ನು ಕರುಣ್ ಜೊತೆಗೂಡಿದ ಪವನ್ ದೂರ ಮಾಡಿದರು. ಇಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು. ಕೊನೆಯ ಹಂತದ ಓವರ್‌ಗಳಲ್ಲಿ ಮಿಂಚಿದ ನಾಗಭರತ್ 12 ಎಸೆತಗಳಲ್ಲಿ 27 ರನ್‌ ಗಳಿಸಿದರು. ಅದರಲ್ಲಿ ಒಂದು ಬೌಂಡರಿ, ಮೂರು ಸಿಕ್ಸರ್‌ಗಳಿದ್ದವು. ಬ್ಲಾಸ್ಟರ್ಸ್‌ಗೆ ಜಯ: ಗುರುವಾರ ಮಧ್ಯಾಹ್ನ ನಡೆದ ಮಹಿಳೆಯರ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ 7 ವಿಕೆಟ್‌ಗಳಿಂದ ಹುಬ್ಬಳ್ಳಿ ಟೈಗರ್ಸ್‌ ತಂಡವನ್ನು ಮಣಿಸಿತು. ಸಂಕ್ಷಿಪ್ತ ಸ್ಕೋರು: ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 5ಕ್ಕೆ157 (ಕರುಣ್ ನಾಯರ್ 42, ಪವನ್ ದೇಶಪಾಂಡೆ 38, ನಾಗ ಭರತ್ ಔಟಾಗದೆ 27, ವಿದ್ವತ್ ಕಾವೇರಪ್ಪ 52ಕ್ಕೆ2, ಕುಶಾಲ್ ವಾಧ್ವಾನಿ 17ಕ್ಕೆ2, ಪ್ರಣವ್ ಭಾಟಿಯಾ 18ಕ್ಕೆ1) ಗುಲ್ಬರ್ಗ ಮಿಸ್ಟಿಕ್ಸ್‌: 19.4 ಓವರ್‌ಗಳಲ್ಲಿ 4ಕ್ಕೆ 158 (ದೇವದತ್ತ ಪಡಿಕ್ಕಲ್ ಅಜೇಯ 96, ಮನೀಷ್‌ ಪಾಂಡೆ 10, ಮನೋಜ್‌ ಭಾಂಡಗೆ ಅಜೇಯ 35, ಪವನ್‌ ದೇಶಪಾಂಡೆ 16ಕ್ಕೆ 2) ಫಲಿತಾಂಶ: ಗುಲ್ಬರ್ಗ ಮಿಸ್ಟಿಕ್ಸ್‌ಗೆ 6 ವಿಕೆಟ್‌ ಗೆಲುವು ಇಂದು ಫೈನಲ್‌: ಬೆಂಗಳೂರು ಬ್ಲಾಸ್ಟರ್ಸ್‌– ಗುಲ್ಬರ್ಗ ಮಿಸ್ಟಿಕ್ಸ್‌ (ಸಂಜೆ 7) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.