ಕ್ವಾಲಿಫೈಯರ್‌ಗೆ ವಾರಿಯರ್ಸ್ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ಶ್ರೇಯಸ್ ಗೋಪಾಲ್ ಆಲ್‌ರೌಂಡ್ ಆಟ ರಂಗೇರಿತು. ಅದರ ಫಲವಾಗಿ ಮೈಸೂರು ವಾರಿಯರ್ಸ್ ತಂಡವು ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿತು. ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮೈಸೂರು ತಂಡವು 5 ವಿಕೆಟ್‌ಗಳಿಂದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಜಯಿಸಿತು. ಉತ್ತಮ ಬ್ಯಾಟರ್‌ಗಳ ಪಡೆ ಹೊಂದಿರುವ ಹುಬ್ಬಳ್ಳಿಯನ್ನು ಶ್ರೇಯಸ್ ಗೋಪಾಲ್ (33ಕ್ಕೆ3) ಕಾಡಿದರು. ಇದರಿಂದಾಗಿ ಲವನೀತ್ ಸಿಸೊಡಿಯಾ ಬಳಗವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 164 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮೈಸೂರು ತಂಡದ ಆರಂಭಿಕ ಬ್ಯಾಟರ್ ನಿಹಾಲ್ ಉಲ್ಲಾಳ (ಔಟಾಗದೆ 77; 58ಎ, 4X6, 6X3) ಹಾಗೂ ಶ್ರೇಯಸ್ (32; 19ಎ, 4X1, 6X2) ಆಟದಿಂದಾಗಿ 19.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 166 ರನ್ ಗಳಿಸಿ ಜಯಿಸಿತು. ನಿಹಾಲ್ ಅವರು, ನಾಯಕ ಕರುಣ್ ನಾಯರ್ ಮೊದಲ ವಿಕೆಟ್‌ ಜೊತೆಯಾಟದಲ್ಲಿ 52 ರನ್‌ ಹಾಗೂ ಎರಡನೇ ವಿಕೆಟ್‌ಗೆ ಪವನ್ ಜೊತೆ 42 ರನ್ ಸೇರಿಸಿದರು. ನಿಹಾಲ್ ಹಾಗೂ ಶ್ರೇಯಸ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿ ತಂಡದ ಜಯ ಸುಲಭಗೊಳಿಸಿದರು. ಹುಬ್ಬಳ್ಳಿ ತಂಡದ ಎಡಗೈ ಸ್ಪಿನ್ನರ್ ಆನಂದ ದೊಡ್ಡಮನಿ (27ಕ್ಕೆ4) ಉತ್ತಮ ಬೌಲಿಂಗ್‌ಗೆ ಜಯ ಒಲಿಯಲಿಲ್ಲ. ಗುರುವಾರ ನಡೆಯುವ ಎರಡನೇ ಕ್ವಾಲಿಫೈಯರ್‌ನಲ್ಲಿ ಮೈಸೂರು ತಂಡವು ಸೆಣಸಲಿದೆ. ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 7ಕ್ಕೆ 164 (ಲವನೀತ್ ಸಿಸೊಡಿಯಾ 33, ಮೊಹಮ್ಮದ್ ತಾಹ 27, ಸ್ವಪ್ನಿಲ್ ಯಳವೆ ಔಟಾಗದೆ 30, ಎಂ.ಜಿ. ನವೀನ್ 32, ಶ್ರೇಯಸ್ ಗೋಪಾಲ್ 33ಕ್ಕೆ3) ಮೈಸೂರು ವಾರಿಯರ್ಸ್: 19.1 ಓವರ್‌ಗಳಲ್ಲಿ 5ಕ್ಕೆ 166 (ನಿಹಾಲ್ ಉಲ್ಲಾಳ ಔಟಾಗದೆ 77, ಕರುಣ್ ನಾಯರ್ 23, ಪವನ್ ದೇಶಪಾಂಡೆ 24, ಶ್ರೇಯಸ್ ಗೋಪಾಲ್ 32, ಆನಂದ ದೊಡ್ಡಮನಿ 27ಕ್ಕೆ4) ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 5 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.