ಶುಭಮನ್‌ ಗಿಲ್‌ಗೆ ಬಡ್ತಿ; ಕೊಹ್ಲಿ ಸ್ಥಿರತೆ ದುಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರೀ ಬಡ್ತಿ ಪಡೆದಿದ್ದು, 38ನೇ ಸ್ಥಾನಕ್ಕೇರಿದ್ದಾರೆ. ಬುಧವಾರ ಪ್ರಕಟವಾದ ಕ್ರಮಾಂಕದಲ್ಲಿ ಅವರು 45 ಸ್ಥಾನಗಳ ಏರಿಕೆ ದಾಖಲಿಸಿದ್ದಾರೆ. ವಿರಾಟ್‌ ಕೊಹ್ಲಿ ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜಿಂಬಾಬ್ವೆ ವಿರುದ್ಧ ಇತ್ತೀಚೆಗೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 22 ವರ್ಷದ ಗಿಲ್, ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಹರಾರೆಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಶತಕವನ್ನೂ (97 ಎಸೆತಗಳಲ್ಲಿ 130 ರನ್) ದಾಖಲಿಸಿದ್ದರು. ಈ ಸರಣಿಯಲ್ಲಿ ಆಡದಿದ್ದ ವಿರಾಟ್‌ ಐದನೇ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ ಕೂಡ ಈ ಸರಣಿಯಲ್ಲಿ ಆಡಿರಲಿಲ್ಲ. ಅವರು ಸದ್ಯ ಆರನೇ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ ಒಂದು ಸ್ಥಾನ ಕುಸಿತ ಕಂಡು 12ನೇ ಸ್ಥಾನಕ್ಕಿಳಿದಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನ ಅಬಾಧಿತವಾಗಿದೆ. ದಕ್ಷಿಣ ಆಫ್ರಿಕಾದ ರಸಿ ವ್ಯಾನ್ ಡರ್ ಡಸೆನ್‌ ಎರಡನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ನ್ಯೂಜಿಲೆಂಡ್‌ ವೇಗಿ ಟ್ರೆಂಟ್ ಬೌಲ್ಟ್‌ ಮೊದಲ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.