ಲಯಕ್ಕೆ ಮರಳುವ ವಿಶ್ವಾಸದಲ್ಲಿ ವಿರಾಟ್ ಕೊಹ್ಲಿ ನವದೆಹಲಿ (ಪಿಟಿಐ): ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿಯೂ ಕಳೆದ ಮೂರು ವರ್ಷಗಳಿಂದ ಶತಕ ದಾಖಲಿಸುವಲ್ಲಿ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ವಿಫಲರಾಗಿದ್ದಾರೆ. ಆದರೂ ಅವರು ತಮ್ಮ ಹಿಂದಿನ ಲಯಕ್ಕೆ ಮರಳುವ ಆತ್ಮವಿಶ್ವಾಸ ಹೊಂದಿದ್ದಾರೆ. ‘ಆಟದಲ್ಲಿ ನನ್ನಿಂದ ಆಗುತ್ತಿರುವ ಲೋಪದ ಕುರಿತು ಸ್ಪಷ್ಟವಾಗಿ ಅರಿವು ಇದೆ. ಸಮಯಕ್ಕೆ ತಕ್ಕಂತೆ ಅವುಗಳನ್ನು ತಿದ್ದಿಕೊಂಡು ಮುನ್ನಡೆದಿದ್ದರಿಂದಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಷ್ಟು ವರ್ಷ ಆಡಲು ಸಾಧ್ಯವಾಗಿದೆ. ಈಗಲೂ ನನ್ನ ಮುಂದೆ ಒಂದು ಸವಾಲಿದೆ. ಈ ಪರಿಸ್ಥಿತಿಯು ಮೇಲುಗೈ ಸಾಧಿಸದಂತೆ ನೋಡಿಕೊಳ್ಳುತ್ತೇನೆ’ ಎಂದು ಕೊಹ್ಲಿ ಸ್ಟಾರ್‌ಸ್ಪೋರ್ಟ್ಸ್ ವಾಹಿನಿಯ ‘ಗೇಮ್ ಪ್ಲಾನ್’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ‘2014ರಲ್ಲಿ ಇಂಗ್ಲೆಂಡ್‌ನಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿಲ್ಲವೆಂಬುದು ಅರಿವಿಗೆ ಬಂದಿತ್ತು. ಆಗ ಕಠಿಣ ಸನ್ನಿವೇಶವಿತ್ತು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಉತ್ತಮವಾಗಿ ಬ್ಯಾಟಿಂಗ್ ಕೌಶಲವನ್ನು ಪ್ರಯೋಗಿಸುತ್ತಿರುವೆ. ಒಂದು ಬಾರಿ ಲಯಕ್ಕೆ ಕುದುರಿದರೆ ಸಾಕು. ಮತ್ತೆ ದೊಡ್ಡ ಇನಿಂಗ್ಸ್ ಆಡಬಲ್ಲೆ’ ಎಂದರು. ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಆಡಲು ಅವರು ದುಬೈಗೆ ತೆರಳಿದ್ದಾರೆ. ವಾಟ್ಸನ್ ವಿಶ್ವಾಸ:‘ಸುಮಾರು ಒಂದು ತಿಂಗಳು ವಿಶ್ರಾಂತಿ ಪಡೆದಿದ್ದ ವಿರಾಟ್ ಈಗ ಸಂಪೂರ್ಣ ಒತ್ತಡ ನಿವಾರಣೆ ಮಾಡಿಕೊಂಡು ಮರಳಿದ್ದಾರೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಮರ್ಥರಾಗಿದ್ದಾರೆ. ಅವರಿಂದ ಈ ಟೂರ್ನಿಯಲ್ಲಿ ಉತ್ತಮ ಇನಿಂಗ್ಸ್ ಹೊರಹೊಮ್ಮಲಿದೆ’ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಕೊಹ್ಲಿ ದೈಹಿಕ ಶಕ್ತಿ ಅಪಾರವಾಗಿವೆ. ಐಪಿಎಲ್‌ ಪಂದ್ಯಗಳಲ್ಲಿಯೇ ಅವರನ್ನು ನೋಡಿದವರಿಗೆ ಅದು ತಿಳಿಯುತ್ತದೆ. ವೈಫಲ್ಯ ಮತ್ತು ದಣಿವು ಎಷ್ಟೇ ಇದ್ದರೂ ಅವರು ಲವಲವಿಕೆಯಿಂದ ಇರುತ್ತಾರೆ. ಅವರನ್ನು ಯಾವುದೇ ಎದುರಾಳಿ ತಂಡವೂ ಈಗ ಹಗುರವಾಗಿ ಪರಿಗಣಿಸಬಾರದು’ ಎಂದು ಐಸಿಸಿ ರಿವೀವ್ ಶೋನಲ್ಲಿ ವಾಟ್ಸನ್ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.