ಟಿ20 ಮಾದರಿಯಲ್ಲಿ ಭಾರತ ಆಕ್ರಮಣ ಶೈಲಿ ಮುಂದುವರಿಸಲಿ: ಶಾಸ್ತ್ರಿ ನವದೆಹಲಿ (ಪಿಟಿಐ): ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಭಾರತ ತಂಡವು ತನ್ನ ಆಕ್ರಮಣಶೈಲಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದು ಕ್ರಿಕೆಟ್ ವೀಕ್ಷಕ ವಿವರಣೆಕಾರ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ. ಹೋದ ವರ್ಷದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಇನಿಂಗ್ಸ್ ಆರಂಭಿಸುವಲ್ಲಿ ಸಾಂಪ್ರದಾಯಿಕ ಶೈಲಿ ಅನುಸರಿಸಿದ್ದು ಫಲ ನೀಡಿರಲಿಲ್ಲ. ಆದ್ದರಿಂದ ತಂಡವು ಬೇಗನೆ ಟೂರ್ನಿಯಿಂದ ಹೊರಬಿದ್ದಿತ್ತು. ‘ನಾನು ತಂಡದ ಕೋಚ್ ಆಗಿದ್ದ ಸಂದರ್ಭದಲ್ಲಿಯೂ ಇದೇ ವಿಷಯದ ಬಗ್ಗೆ ಮಾತನಾಡಿದ್ದೆವು. ಅಗ್ರಕ್ರಮಾಂಕದ ಬ್ಯಾಟರ್‌ಗಳು ಹಿಂಜರಿಯಬಾರದು. ಧೈರ್ಯದಿಂದ ಆಡಬೇಕು. ಕೆಳಕ್ರಮಾಂಕದಲ್ಲಿ ಉತ್ತಮ ಬ್ಯಾಟರ್‌ಗಳು ಹೆಚ್ಚು ಕಾಣಿಕೆ ನೀಡುವಂತಿರಬೇಕು’ ಎಂದು ಸ್ಟಾರ್ ಸ್ಪೋರ್ಟ್ಸ್‌ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವೆಸ್ಟ್ ಇಂಡೀಸ್ ಸರಣಿಯಲ್ಲ ಆಡದಿರುವ ವಿರಾಟ್ ಕೊಹ್ಲಿ ಹಾಗೂ ಗಾಯದಿಂದ ಚೇತರಿಸಿಕೊಂಡಿರುವ ಕೆ.ಎಲ್. ರಾಹುಲ್ ಅವರನ್ನು ಅಂತಿಮ ಹನ್ನೊಂದರ ಕಣಕ್ಕಿಳಿಸಬೇಕೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ‘ಅವರು ಅನುಭವಿ ಆಟಗಾರರು. ಐಪಿಎಲ್ ಹಾಗೂ ಟಿ20 ಸರಣಿಗಳಲ್ಲಿ ಆಡಿದ ಅಪಾರ ಅನುಭವ ಇದೆ. ಅವರಿಗೆ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಚ್ಚು ಸಮಯ ಬೇಕಿಲ್ಲ. ಉಪಯುಕ್ತ ಕಾಣಿಕೆ ನೀಡಬಲ್ಲ ಸಮರ್ಥರು’ ಎಂದರು. ‘ಹಾರ್ದಿಕ್ ಪಾಂಡ್ಯ ಬಹಳ ಪ್ರಮುಖ ಆಟಗಾರ. ತಂಡದ ಸಮತೋಲನ ಕಾಪಾಡಲು ಹಾರ್ದಿಕ್ ಇರುವುದು ಮುಖ್ಯ’ ಎಂದರು. ‘ಕೊಹ್ಲಿ ಜೊತೆಗೆ ಇತ್ತೀಚೆಗೆ ನಾನು ಮಾತನಾಡಿಲ್ಲ. ಆದರೆ ಅವರಿಗೆ ತಮ್ಮ ನೈಜ ಲಯಕ್ಕೆ ಮರಳುವ ಸಾಮರ್ಥ್ಯವಿದೆ. ಇದೇನೂ ರಾಕೆಟ್‌ ವಿಜ್ಞಾನವಲ್ಲ. ಮಾನಸಿಕ ಒತ್ತಡಕ್ಕೆ ದೊಡ್ಡ ದೊಡ್ಡ ದಿಗ್ಗಜರೂ ವೈಫಲ್ಯ ಅನುಭವಿಸಿದ್ದಾರೆ. ಒಂದು ಪಂದ್ಯದಲ್ಲಿ ಶಾಂತಚಿತ್ತದಿಂದ ಅರ್ಧಶತಕ ಗಳಿಸಿದರೆ ಸಾಕು. ಎಲ್ಲ ಟೀಕಾಕಾರರ ಬಾಯಿ ಮುಚ್ಚುತ್ತದೆ’ ಎಂದು ರವಿಶಾಸ್ತ್ರಿ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.