ಸಿಕ್ಸರ್ ಬಾರಿಸಿದ ಕಿಂಗ್ ಕೊಹ್ಲಿ; ಚೆಂಡು ಶಾರ್ಜಾ ಸ್ಟೇಡಿಯಂನಿಂದ ಹೊರಕ್ಕೆ! ಶಾರ್ಜಾ: ಮರಳುನಾಡಿನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಆಟದ ಮೂಲಕ ಗಮನ ಸೆಳೆದಿದ್ದಾರೆ. ಕೋಲ್ಕತ್ತ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಕೇವಲ 92 ರನ್ನಿಗೆ ಆಲೌಟ್ ಆದಾಗ ಅತಿ ಹೆಚ್ಚು ಟೀಕೆಗೆ ಒಳಗಾಗಿದ್ದ ನಾಯಕ ವಿರಾಟ್ ಕೊಹ್ಲಿ, ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಶಾರ್ಜಾದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನೆಡಯುತ್ತಿರುವ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ, ಫಾರ್ಮ್‌ಗೆ ಮರಳಿದರು. ಅಲ್ಲದೆ ಶಾರ್ದೂಲ್ ಠಾಕೂರ್ ಎಸೆದ ದಾಳಿಯಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ../vBruiVkA5y ಶಾರ್ದೂಲ್ ಠಾಕೂರ್ ಎಸೆದ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ, ಚೆಂಡನ್ನು ಸ್ಟೇಡಿಯಂನಿಂದ ಹೊರಗಟ್ಟಿದರು. ಚೆಂಡು ನೇರವಾಗಿ ಬೌಂಡರಿ ಗೆರೆಯನ್ನು ದಾಟಲಿದೆ ಎಂಬ ಆತ್ಮವಿಶ್ವಾಸವನ್ನು ವಿರಾಟ್ ಕೊಹ್ಲಿ ಹೊಂದಿದ್ದರು. ಅದಕ್ಕಾಗಿಯೇ ಚೆಂಡನ್ನು ಹೊಡೆದ ಬಳಿಕ ಹಿಂತಿರುಗಿಯೂ ನೋಡಲಿಲ್ಲ. ಐಪಿಎಲ್‌ನಲ್ಲಿ 41ನೇ ಅರ್ಧಶತಕದ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ, 41 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.