2021: ಐಪಿಎಲ್‌ನಲ್ಲಿ ಧೋನಿ ಮುಂದಿನ ವರ್ಷ ಆಡುತ್ತಾರೆಯೇ? ದುಬೈ: ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಆಡುತ್ತೇನೆಯೇ ಎಂಬುದರ ಬಗ್ಗೆ ಖಚಿತತೆಯಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಮಾತು ಮುಂದುವರಿಸಿದ ಮಹಿ, ಇವೆಲ್ಲವೂ ಐಪಿಎಲ್ ಫ್ರಾಂಚೈಸಿಯು ಆಟಗಾರರನ್ನು ಉಳಿಸಿಕೊಳ್ಳುವ ನಿಯಮವನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಐಪಿಎಲ್ ಬಳಿಕ ಧೋನಿ ವಿದಾಯ? ಊಹಾಪೋಹಗಳಿಗೆ ತೆರೆ ಎಳೆದ ಕೂಲ್ ಕ್ಯಾಪ್ಟನ್ ಐಪಿಎಲ್‌ನಲ್ಲಿ ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದ ಟಾಸ್ ವೇಳೆ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, 'ಮುಂದಿನ ವರ್ಷವೂ ನನ್ನನ್ನು ಹಳದಿ ಜೆರ್ಸಿಯಲ್ಲಿ ನೋಡಬಹುದಾಗಿದೆ. ಆದರೆ ಸಿಎಸ್‌ಕೆ ಪರ ಆಡುತ್ತೇನೆಯೇ? ಎರಡು ಹೊಸ ತಂಡಗಳು ಬರಲಿರುವುದರಿಂದ ಬಹಳಷ್ಟು ಅನಿಶ್ಚಿತತೆಕಾಡುತ್ತಿದೆ' ಎಂದು ವಿವರಿಸಿದ್ದಾರೆ. 'ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳ ಬಗ್ಗೆ ಸ್ಪಷ್ಟತೆಯಿಲ್ಲ. ಎಷ್ಟು ಭಾರತೀಯರು ಹಾಗೂ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬುದು ತಿಳಿದಿಲ್ಲ. ಆದ್ದರಿಂದ ಸಾಕಷ್ಟು ಅನಿಶ್ಚಿತತೆ ಮುಂದುವರಿದಿದೆ. ಹಾಗಾಗಿ ನಿಯಮಗಳು ಜಾರಿಯಾಗುವವರೆಗೆ ನಿಜವಾಗಿಯೂ ನಿರ್ಧರಿಸಲು ಸಾಧ್ಯವಿಲ್ಲ. ಅಲ್ಲಿಯವರೆಗೆ ಕಾಯಬೇಕಿದೆ. ಎಲ್ಲರಿಗೂ ಪೂರಕವಾದ ನಿಯಮಗಳನಿರೀಕ್ಷೆಯಲ್ಲಿದ್ದೇವೆ' ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದಲ್ಲಿ, ಚೆನ್ನೈಯಲ್ಲೇ ವಿದಾಯದ ಪಂದ್ಯ ಆಡುವುದಾಗಿ ಧೋನಿ ಹೇಳಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.