ಮಹಿ ಭಾಯ್ ನೋಡುತ್ತಾ ಕ್ರಿಕೆಟ್ ಆರಂಭಿಸಿದೆ, ಅವರಂತೆ ಫಿನಿಶರ್ ಆಗುವ ಆಸೆ: ರಿಪಾಲ್ ದುಬೈ: ‘ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರನ್ನು ನೋಡಿಕೊಂಡು ಕ್ರಿಕೆಟ್‌ ಆಡುವುದನ್ನು ಆರಂಭಿಸಿದೆ. ಅವರಂತೆ ಗೇಮ್‌ ಫಿನಿಶರ್‌ ಆಗುವುದಕ್ಕೆ ಬಯಸುತ್ತೇನೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಯುವ ಆಟಗಾರ ರಿಪಾಲ್‌ ಪಟೇಲ್‌ ಹೇಳಿದ್ದಾರೆ. ಸೋಮವಾರ ನಡೆದ ಐಪಿಎಲ್‌ ಟೂರ್ನಿಯ 50ನೇ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಡೆಲ್ಲಿ 3 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸಿಎಸ್‌ಕೆ ವಿರುದ್ಧ ಚೊಚ್ಚಲ ಪಂದ್ಯವಾಡಿದ 26 ವರ್ಷದ ರಿಪಾಲ್‌, 18 ರನ್‌ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಪಂದ್ಯ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಿ ಭಾಯ್‌ ಮುಂದೆ ನಿಂತು ಬ್ಯಾಟಿಂಗ್‌ ಮಾಡಿದ ಸಂದರ್ಭ ನನಗೆ ತುಂಬಾ ವಿಶೇಷವಾಗಿತ್ತು. ಅವರು (ಧೋನಿ) ನನ್ನ ಆಟವನ್ನು ನೋಡುತ್ತಿರುವುದು ನಿಜಕ್ಕೂ ಅವಿಸ್ಮರಣೀಯ ಎಂದು ಭಾವಿಸಿದ್ದೆ’ ಎಂದು ಹೇಳಿದ್ದಾರೆ. ‘ಉತ್ತಮ ರೀತಿಯಲ್ಲಿ ಆಟವಾಡಲು ಧೋನಿ ಅವರಿಂದ ಸಾಕಷ್ಟು ಸಲಹೆಗಳನ್ನು ಪಡೆದುಕೊಂಡಿದ್ದೇನೆ. ಅವರು ನನಗೆ ತುಂಬಾ ಆತ್ಮವಿಶ್ವಾಸ ತುಂಬಿದ್ದಾರೆ’ ಎಂದು ರಿಪಾಲ್‌ ತಿಳಿಸಿದ್ದಾರೆ. ‘ಚೆನ್ನೈ ವಿರುದ್ಧದ ಪಂದ್ಯ ಗೆಲ್ಲುವುದು ನಮಗೆ ಬಹಳ ಮುಖ್ಯವಾಗಿತ್ತು. 3 ಎಸೆತಗಳಲ್ಲಿ 2 ರನ್‌ ಬೇಕಾದಾಗ ನಾವು ಒಂದೆರಡು ರನ್‌ ಹುಡುಕುತ್ತಿದ್ದೆವು. ರಬಾಡ ಬೌಂಡರಿ ಗಳಿಸುವುದರೊಂದಿಗೆ ಆಟವನ್ನು ಮುಗಿಸಿದರು. ಆ ಕ್ಷಣ ಅದ್ಭುತವಾಗಿತ್ತು’ ಎಂದಿದ್ದಾರೆ. # 50 #, @ 1⃣0⃣ & 🔽# ../lgh6V2a5nc ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.