ದ್ರಾವಿಡ್ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವುದು ಕೊಹ್ಲಿಗೆ ತಿಳಿದಿಲ್ಲವೇ? ದುಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ಹುದ್ದೆಗೆ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಕುರಿತು ಕೇಳಿದಾಗ ಏನಾಗುತ್ತಿದೆ ಎಂಬುದು ನಿಖರವಾಗಿ ತಿಳಿದಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತರಿಸಿದ್ದಾರೆ. ಪ್ರಸ್ತುತ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವರಕಾರ್ಯಾವಧಿಯು ಟ್ವೆಂಟಿ-20 ವಿಶ್ವಕಪ್ ಬಳಿಕ ಮುಕ್ತಾಯವಾಗಲಿದೆ. ಬಳಿಕಟೀಮ್ ಇಂಡಿಯಾದ ಮುಖ್ಯ ತರಬೇತುದಾರ ಹುದ್ದೆಯನ್ನು ವಹಿಸಲು ಬಿಸಿಸಿಐ ಮುಂದಿರಿಸಿರುವ ಪ್ರಸ್ತಾಪವನ್ನು ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದಾರೆ ಎಂಬುದು ವರದಿಯಾಗಿದೆ. ಇದನ್ನೂ ಓದಿ:ರಾಹುಲ್ ದ್ರಾವಿಡ್‌ಗೆ ಬಲಾಢ್ಯ ತಂಡ ಕಟ್ಟುವ ಹೊಣೆ? ಈ ಕುರಿತು ಕೇಳಿದಾಗ ಉತ್ತರಿಸಿರುವ ಕೊಹ್ಲಿ 'ಏನಾಗುತ್ತಿದೆ ಎಂದು ನಿಖರವಾಗಿ ತಿಳಿದಿಲ್ಲ. ಯಾರೊಂದಿಗೂಇನ್ನೂ ವಿವರವಾಗಿ ಚರ್ಚೆ ನಡೆಸಿಲ್ಲ' ಎಂದು ಹೇಳಿದ್ದಾರೆ. ಯುಎಇ ಹಾಗೂ ಒಮಾನ್‌ನಲ್ಲಿ ಆರಂಭವಾಗಿರುವ ಟಿ20 ವಿಶ್ವಕಪ್‌ಗೂ ಮುಂಚಿತವಾಗಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ದ್ರಾವಿಡ್, ಅನೇಕ ಯುವ ಪ್ರತಿಭಾವಂತ ಆಟಗಾರರನ್ನು ಬೆಳೆಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಮಾತುಕತೆ ನಡೆಸಿ ದ್ರಾವಿಡ್ ಅವರನ್ನು ಮನವೊಲಿಸಿದ್ದಾರೆ ಎಂದು ವರದಿಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.