ಭಾರತ–ಪಾಕ್ ಕ್ರಿಕೆಟ್ ಪಂದ್ಯ ನಡೆಯಲಿ: ಪ್ರಕಾಶ್ ಪಡುಕೋಣೆ ಮುಂಬೈ: ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯವು ನಡೆಯಬೇಕು ಎಂದು ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅಭಿಪ್ರಾಯಪಟ್ಟಿದ್ದಾರೆ. ಇದೇ 24ರಂದು ಭಾರತ ಮತ್ತು ಪಾಕ್ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಆದರೆ ಈಚೆಗೆ ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದನೆ ದಾಳಿ ನಡೆದಿದ್ದು, ಪಾಕ್ ಪ್ರಚೋದನೆ ಇದರ ಹಿಂದಿದೆ. ಆದ್ದರಿಂದ ಕ್ರಿಕೆಟ್‌ ಪಂದ್ಯ ನಡೆಸಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿದೆ. ಮಂಗಳವಾರ ನ್ಯಾಷನ್‌ ಸ್ಪೋರ್ಟ್ಸ್‌ ಕ್ಲಬ್ ಆಫ್‌ ಇಂಡಿಯಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಕಾಶ್, ‘ರಾಜಕೀಯ ಮತ್ತು ಕ್ರೀಡೆಯನ್ನು ಬೆರೆಸಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಪಂದ್ಯವು ತನ್ನ ಪಾಡಿಗೆ ನಡೆಯಬೇಕು. ಆದರೂ ನಾನು ಈ ಕುರಿತು ಮಾತನಾಡಲು ಅಧಿಕೃತ ವ್ಯಕ್ತಿಯಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ’ ಎಂದಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಈ ತಿಂಗಳು 11 ನಾಗರಿಕರನ್ನು ಭಯೋತ್ಪಾದಕರು ಹತ್ಯೆ ಮಾಡಿರುವ ವರದಿಯಾಗಿದೆ. ಹೋದ ಭಾನುವಾರ ಉಗ್ರರ ದಾಳಿಯಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಮೃತರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.