ಭಾರತ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಸ್ಥಾನಕ್ಕೆ ಅಭಯ್ ಶರ್ಮಾ ಅರ್ಜಿ ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಸ್ಥಾನಕ್ಕಾಗಿ ಕ್ರಿಕೆಟಿಗ ಅಭಯ್ ಶರ್ಮಾ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಅವಧಿಯು ಮುಕ್ತಾಯವಾಗಿದೆ. ಅವರ ಸ್ಥಾನಕ್ಕೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ನವೆಂಬರ್ 3 ಕೊನೆಯ ದಿನವಾಗಿದೆ. 52 ವರ್ಷದ ಅಭಯ್ ಭಾರತ ಎ ಮತ್ತು 19 ವರ್ಷದೊಳಗಿನವರ ತಂಡಗಳಲ್ಲಿ ಕೋಚ್ ಆಗಿದ್ದರು. ಇತ್ತೀಚೆಗೆ ಭಾರತ ಮಹಿಳಾ ತಂಡಕ್ಕೂ ಅವರು ಮಾರ್ಗದರ್ಶನ ನೀಡಿದ್ದರು. ಶರ್ಮಾ ದೆಹಲಿ, ರೈಲ್ವೆಸ್ ಮತ್ತು ರಾಜಸ್ಥಾನ ತಂಡಗಳಲ್ಲಿ ಆಡಿದ್ದರು. 89 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. 2016ರಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದರು. ಅದೇ ವರ್ಷ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿಆಡಿದ್ ಭಾರತ ತಂಡಕ್ಕೂ ಶರ್ಮಾ ಮಾರ್ಗದರ್ಶನ ಮಾಡಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಕೋಚ್ ಆಗಿರುವ ಶರ್ಮಾ, ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.