ನೆದರ್ಲೆಂಡ್ಸ್ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದ ನಮೀಬಿಯ ಅಬುಧಾಬಿ: ಸಂಕಷ್ಟದಲ್ಲಿದ್ದ ತಂಡವನ್ನು ಅಮೋಘ ಜೊತೆಯಾಟದ ಮೂಲಕ ರಕ್ಷಿಸಿದ ಡೇವಿಡ್‌ ವೀಸ್, ವಿಶ್ವಕಪ್ ಪ್ರಾಥಮಿಕ ಹಂತದ ಪಂದ್ಯದಲ್ಲಿ ನಿಮೀಬಿಯಾಗೆ ಭರ್ಜರಿ ಜಯ ಗಳಿಸಿಕೊಟ್ಟರು. ಬುಧವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಮೀಬಿಯ ಆರು ವಿಕೆಟ್‌ಗಳಿಂದ ಗೆದ್ದಿತು. 165 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ನಮೀಬಿಯ 8.2 ಓವರ್ ಆಗುವಷ್ಟರಲ್ಲಿ 52 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ನಾಯಕ ಜೆರಾರ್ಡ್ ಎರಾಸ್ಮಸ್ ಅವರ ಜೊತೆಗೂಡಿದ ಡೇವಿಡ್ ವೀಸ್ (ಔಟಾಗದೆ 66; 40 ಎಸೆತ, 4 ಬೌಂಡರಿ, 5 ಸಿಕ್ಸರ್‌) ನಾಲ್ಕನೇ ವಿಕೆಟ್‌ಗೆ 93 ರನ್‌ ಸೇರಿಸಿದರು. ಮುರಿಯದ ಐದನೇ ವಿಕೆಟ್‌ಗೆ ಜೆ.ಜೆ.ಸ್ಮಿತ್ ಜೊತೆಗೆ 21 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮೋಹಕ ಸಿಕ್ಸರ್‌ ಮತ್ತು ಬೌಂಡರಿಗಳ ಮೂಲಕ ಮಿಂಚಿದ ವೀಸ್‌ ಅವರು ಕ್ರೀಸ್‌ಗೆ ಬಂದ ನಂತರ ರನ್‌ಗಳು ವೇಗವಾಗಿ ಹರಿದು ಬಂದವು. ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದ ಅವರು ಪಂದ್ಯದ ಗತಿಯನ್ನೇ ಬದಲಿಸಿದರು. ನಮೀಬಿಯಗೆ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿದೆ. ಸ್ಪಿನ್ ಮತ್ತು ವೇಗದ ಬೌಲರ್‌ಗಳನ್ನು ಸತತವಾಗಿ ಕಾಡಿದ 36 ವರ್ಷದ ವೀಸ್ ಎದುರಾಳಿ ತಂಡದ ನಾಯಕ ಪೀಟರ್ ಸೀಲರ್ ಎಸೆತವನ್ನು ಸಿಕ್ಸರ್‌ಗೆ ಎತ್ತಿ 50 ರನ್ ಪೂರೈಸಿದರು. ಇದಕ್ಕೆ ಅವರು ತೆಗೆದುಕೊಂಡದ್ದು 29 ಎಸೆತ ಮಾತ್ರ. 22 ಎಸೆತಗಳಲ್ಲಿ 32 ರನ್ ಸಿಡಿಸಿದ ಎರಾಸ್ಮಸ್ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸಿದರು. ಈ ಗೆಲುವಿನ ಮೂಲಕ ನಮೀಬಿಯದ ಸೂಪರ್ 12 ಕನಸು ಜೀವಂತವಾಗಿ ಉಳಿದಿದೆ. ಮ್ಯಾಕ್ಸ್ ಒಡೌಡ್ ಭರ್ಜರಿ ಬ್ಯಾಟಿಂಗ್ ಟಾಸ್ ಗೆದ್ದ ನಮೀಬಿಯ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮ್ಯಾಕ್ಸ್ ಒಡೌಡ್ (70; 56 ಎ, 6 ಬೌಂ, 1 ಸಿ) ಸತತ ಎರಡನೇ ಅರ್ಧಶತಕ ಗಳಿಸಿ ಮಿಂಚಿದರು. ಕಾಲನ್ ಆಕ್‌ಮನ್ (35; 32ಎ 1 ಬೌಂ, 1 ಸಿ) ಮತ್ತು ಸ್ಕಾಟ್ ಎಡ್ವರ್ಡ್ಸ್‌ (21; 11ಎ, 2 ಬೌಂ, 1 ಸಿ) ಅವರಿಂದ ಒಡೌಡ್ ಅವರಿಗೆ ಉತ್ತಮ ಸಹಕಾರ ಲಭಿಸಿತು. ಈ ಮೂವರ ಬ್ಯಾಟಿಂಗ್‌ನಿಂದಾಗಿ ತಂಡ 4 ವಿಕೆಟ್‌ಗಳಿಗೆ 164 ರನ್ ಗಳಿಸಿತು. ಸಂಕ್ಷಿಪ್ತ ಸ್ಕೋರು: ನೆದರ್ಲೆಂಡ್ಸ್: 20 ಓವರ್‌ಗಳಲ್ಲಿ 4ಕ್ಕೆ 164 (ಮ್ಯಾಕ್ಸ್‌ ಓಡೌನ್‌ 70, ಸ್ಟೀಫನ್ ಮೈಬರ್ಗ್ 17, ಕಾಲಿನ್ ಅಕರ್‌ಮನ್ 37, ಸ್ಕಾಟ್ ಎಡ್ವರ್ಡ್ಸ್‌ 21; ಡೇವಿಡ್ ವೀಸ್‌ 32ಕ್ಕೆ1, ಜಾನ್ ಫ್ರೈಲಿಂಕ್ 36ಕ್ಕೆ2); ನಮಿಬಿಯಾ: 19 ಓವರ್‌ಗಳಲ್ಲಿ 4ಕ್ಕೆ 166 (ಸ್ಟೀಫನ್ ಬಾರ್ಡ್ 19, ಜೇನ್ ಗ್ರೀನ್‌ 15, ಜೆರಾರ್ಡ್ ಎರಾಸ್ಮಸ್‌ 32, ಡೇವಿಡ್ ವೀಸ್ ಔಟಾಗದೆ 66, ಜೆ.ಜೆ.ಸ್ಮಿತ್ ಔಟಾಗದೆ 14; ಫ್ರೆಡ್ರಿಕ್ಸ್ ಕ್ಲಾಸೆನ್ 14ಕ್ಕೆ1, ಕಾಲಿನ್ ಅಕರ್‌ಮನ್ 32ಕ್ಕೆ1, ಟಿಮ್ ವ್ಯಾನ್ 32ಕ್ಕೆ1, ಪೀಟರ್ ಸೀಲರ್ 8ಕ್ಕೆ1). ಫಲಿತಾಂಶ: ನಮಿಬಿಯಾಗೆ 6 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಡೇವಿಡ್ ವೀಸ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.