ಪುರುಷರ ಫ್ರ್ಯಾಂಚೈಸಿಗೆ ಸಾರಾ ಟೇಲರ್ ಕೋಚ್ ಅಬುಧಾಬಿ: ಇಂಗ್ಲೆಂಡ್‌ನ ಮಾಜಿ ಕ್ರಿಕೆಟ್ ಆಟಗಾರ್ತಿ ಪುರುಷರ ಕ್ರಿಕೆಟ್ ಫ್ರ್ಯಾಂಚೈಸಿಯ ಕೋಚ್ ಹುದ್ದೆಗೆ ನೇಮಕವಾದ ಮೊದಲ ಮಹಿಳೆಯಾಗಿದ್ದಾರೆ. ಮುಂದಿನ ತಿಂಗಳು 19ರಿಂದ ನಡೆಯಲಿರುವ ಅಬುಧಾಬಿ ಟಿ10 ಲೀಗ್‌ನಲ್ಲಿ ಅಬುಧಾಬಿ ತಂಡಕ್ಕೆ ಅವರು ಸಹಾಯಕ ಕೋಚ್ ಆಗಿ ನೇಮಕವಾಗಿದ್ದಾರೆ. ಇಂಗ್ಲೆಂಡ್ ತಂಡದ ವಿಕೆಟ್‌ಕೀಪರ್ ಆಗಿದ್ದ ಸಾರಾ ಟೇಲರ್ ಮಹಿಳಾ ಕ್ರಿಕೆಟ್‌ನ ಖ್ಯಾತನಾಮರಲ್ಲಿ ಒಬ್ಬರಾಗಿದ್ದಾರೆ. ‘ಫ್ರ್ಯಾಂಚಸಿ ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟಿರುವುದು ಹೊಸ ಅನುಭವ. ಬೇರೆ ಬೇರೆ ದೇಶಗಳ ಆಟಗಾರರು ಮತ್ತು ಕೋಚ್‌ಗಳನ್ನು ಇಲ್ಲಿ ಭೇಟಿಯಾಗಲು ಸಾಧ್ಯವಾಗುತ್ತದೆ. ಯುವ ಅಟಗಾರ್ತಿಯರು ನನ್ನ ಈ ಕಾರ್ಯವನ್ನು ಗಮನಿಸಿ ಪ್ರೇರಣೆಗೊಳ್ಳಬಹುದು. ಕ್ರಿಕೆಟ್‌ನಲ್ಲಿ ಮುಂದುವರಿಯುವ ವಿಶ್ವಾಸ ಅವರಲ್ಲಿ ಬೆಳೆಯಬಹುದು’ ಎಂದು 32 ವರ್ಷದ ಟೇಲರ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಅವರು 10 ಟೆಸ್ಟ್, 126 ಅಂತರರಾಷ್ಟ್ರೀಯ ಏಕದಿನ ಮತ್ತು 90 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.