ಕ್ಷಮೆ ಕೋರಿದ ಕ್ವಿಂಟನ್ ಡಿ’ಕಾಕ್ ದುಬೈ: ವರ್ಣ ತಾರತಮ್ಯದ ವಿರುದ್ಧ ಮೊಣಕಾಲೂರಿ ಪ್ರತಿಭಟನೆ ವ್ಯಕ್ತಪಡಿಸಲು ಮುಂದಾಗದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ’ಕಾಕ್ ಕ್ಷಮೆ ಕೋರಿದ್ದು ಮುಂದಿನ ಪಂದ್ಯದಲ್ಲಿ ಕಪ್ಪು ವರ್ಣೀಯರಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ‘ವರ್ಣ ತಾರತಮ್ಯದ ವಿರುದ್ಧ ನಡೆಯಬೇಕಾಗಿರುವ ಹೋರಾಟದ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ. ಈ ವಿಷಯದಲ್ಲಿ ಕ್ರೀಡಾಪಟುಗಳು ಮಾದರಿಯಾಗಬೇಕು ಎಂಬುದೂ ನನಗೆ ತಿಳಿದಿದೆ. ಇದು ವಿವಾದ ಆಗಬೇಕು ಎಂದು ಬಯಸುವುದಿಲ್ಲ. ತಂಡದ ಸಹ ಆಟಗಾರರು ಮತ್ತು ದೇಶದ ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತಿದ್ದೇನೆ’ ಎಂದು ಡಿ’ಕಾಕ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ‘ನನ್ನ ಕುಟುಂಬದಲ್ಲಿ ಎರಡೂ ಬಣ್ಣದವರು ಇದ್ದಾರೆ. ತಂಗಿಯಂದಿರು ಬಿಳಿಯರಾಗಿದ್ದು ತಾಯಿ ಕಪ್ಪುವರ್ಣದವರು. ಸಣ್ಣಂದಿನಿಂದಲೇ ಕಪ್ಪುವರ್ಣೀಯರ ಬಗ್ಗೆ ವಿಶೇಷ ಕಾಳಜಿ ಇತ್ತು’ ಎಂದು ಅವರು ವಿವರಿಸಿದ್ದಾರೆ. ಮಂಗಳವಾರ ವೆಸ್ಟ್ ಇಂಡೀಸ್ ಎದುರು ನಡೆದ ಪಂದ್ಯದ ಸಂದರ್ಭದಲ್ಲಿ ‘ಬ್ಲ್ಯಾಕ್ ಲಿವ್ಸ್‌ ಮ್ಯಾಟರ್‌’ ಆಂದೋಲನದ ಪರವಾಗಿ ಮೊಣಕಾಲೂರಲು ಡಿ’ಕಾಕ್ ನಿರಾಕರಿಸಿದ್ದರು. ಇದಕ್ಕೆ ಎಲ್ಲ ಕಡೆಯಿಂದ ಟೀಕೆಗಳು ಕೇಳಿಬಂದಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.