ಸೂಪರ್ 12 ರ ಹಂತ: ಶ್ರೀಲಂಕಾ ಗೌರವಾರ್ಹ ಮೊತ್ತ ದುಬೈ(ಪಿಟಿಐ): ಕುಶಾಲ ಪೆರೆರಾ ಮತ್ತು ಬಾನುಕಾ ರಾಜಪಕ್ಷೆ ಅವರ ಚುರುಕಿನ ಬ್ಯಾಟಿಂಗ್‌ನಿಂದಾಗಿ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಗಳಿಸಿತು. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್ 12 ರ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೀಲಂಕಾ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 154 ರನ್ ಗಳಿಸಿತು. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (27ಕ್ಕೆ2), ಪ್ಯಾಟ್ ಕಮಿನ್ಸ್ (34ಕ್ಕೆ2) ಮತ್ತು ಸ್ಪಿನ್ನರ್ ಆ್ಯಡಂ ಜಂಪಾ (12ಕ್ಕೆ2) ಶ್ರೀಲಂಕಾ ತಂಡವು ದೊಡ್ಡ ಮೊತ್ತ ಕಲೆಹಾಕದಂತೆ ತಡೆಯೊಡ್ಡಿದರು. ಲಂಕಾ ಇನಿಂಗ್ಸ್‌ನ ಆರಂಭ ಉತ್ತಮವಾಗಿರಲಿಲ್ಲ. ಮೂರನೇ ಓವರ್‌ನಲ್ಲಿಯೇ ಪ್ಯಾಟ್ ಕಮಿನ್ಸ್‌ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಪಥುಮ್ ನಿಸಾಂಕ (7ರನ್) ಔಟಾದರು. ಕ್ರೀಸ್‌ನಲ್ಲಿದ್ದ ಕುಶಾಲ ಪರೆರಾ (35; 25ಎ) ಅವರೊಂದಿಗೆ ಸೇರಿಕೊಂಡ ಅಸಲಂಕಾ (35; 27ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 63 ರನ್ ಸೇರಿಸಿದರು. ಇದರಿಂದಾಗಿ ರನ್‌ರೇಟ್ ಕೂಡ ಚೆನ್ನಾಗಿತ್ತು. ಆದರೆ, ಸ್ಪಿನ್ನರ್ ಆ್ಯಡಂ ಜಂಪಾ 10ನೇ ಓವರ್‌ನಲ್ಲಿ ಅಸಲಂಕಾ ವಿಕೆಟ್ ಗಳಿಸಿ, ಜೊತೆಯಾಟ ಮುರಿದರು. ನಂತರದ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕುಶಾಲ ಪರೆರಾ ಔಟಾದರು. ಜಂಪಾ ಹಾಕಿದ 12ನೇ ಓವರ್‌ನಲ್ಲಿ ಅವಿಷ್ಕಾ ಫರ್ನಾಂಡೊ ಔಟಾದರು. ಇದರಿಂದಾಗಿ ರನ್‌ ಗಳಿಕೆಯ ವೇಗ ಕುಸಿಯಿತು. ಆದರೆ, ರಾಜಪಕ್ಸ (ಔಟಾಗದೆ 33; 26ಎ, 4 ಬೌಂಡರಿ, 1ಸಿಕ್ಸರ್) ಅವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ತಂಡದ ಮೊತ್ತವು ಹೆಚ್ಚಾಯಿತು. ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ಇನ್ನೊಂದೆಡೆ ರಾಜಪಕ್ಸ ಅವರ ಆತ್ಮವಿಶ್ವಾಸದ ಆಟ ಗಮನ ಸೆಳೆಯಿತು. ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ ಒಂದು ಓವರ್ ಬೌಲಿಂಗ್ ಮಾಡಿ 16 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.