ವೆಸ್ಟ್ ಇಂಡೀಸ್‌ಗೆ ಬಾಂಗ್ಲಾ ಸವಾಲು: ಮಾಡು–ಮಡಿ ಪಂದ್ಯ ಶಾರ್ಜಾ: ಸತತ ಎರಡು ಪಂದ್ಯಗಳನ್ನು ಸೋತಿರುವ ಬಾಂಗ್ಲಾದೇಶ ಮತ್ತು ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಗಳು ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಒಂದನೇ ಗುಂಪಿನ ಸೂಪರ್ 12 ಹಂತದ ಮಹತ್ವದ ಪಂದ್ಯದಲ್ಲಿ ಶುಕ್ರವಾರ ಸೆಣಸಲಿವೆ. ಸೆಮಿಫೈನಲ್ ಹಂತಕ್ಕೆ ಸಾಗುವ ಕನಸು ಜೀವಂತವಾಗಿ ಉಳಿಸಬೇಕಾದರೆ ಈ ಪಂದ್ಯದಲ್ಲಿ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಆದ್ದರಿಂದ ಹಣಾಹಣಿ ಕುತೂಹಲಕ್ಕೆ ಕಾರಣವಾಗಿದೆ. ಬಲಿಷ್ಠ ತಂಡವಾಗಿರುವ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 55 ರನ್‌ಗಳಿಗೆ ಆಲೌಟಾಗಿದ್ದ ತಂಡ ಎರಡನೇ ಪಂದ್ಯದಲ್ಲಿ ನೂರರ ಗಡಿ ದಾಟಿತ್ತಾದರೂ ಎವಿನ್ ಲೂಯಿಸ್‌ ಅವರನ್ನು ಹೊರತುಪಡಿಸಿದರೆ ತಂಡದ ಇತರ ಬ್ಯಾಟರ್‌ಗಳು ನಿರೀಕ್ಷೆಗೆ ತಕ್ಕಂತೆ ಆಡಿರಲಿಲ್ಲ. ಆ ಪಂದ್ಯದಲ್ಲಿ ಲೆಂಡ್ಲ್‌ ಸಿಮನ್ಸ್ ಅವರಿಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು 35 ಎಸೆತಗಳಲ್ಲಿ 16 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಕೊನೆಯ ಒಂಬತ್ತು ಓವರ್‌ಗಳಲ್ಲಿ 64 ರನ್‌ಗಳಿಗೆ ಎಂಟು ವಿಕೆಟ್‌ ಕಳೆದುಕೊಂಡಿತ್ತು. ಶುಕ್ರವಾರದ ಪಂದ್ಯದಲ್ಲಿ ಸಿಮನ್ಸ್ ಬದಲಿಗೆ ರಾಸ್ಟನ್ ಚೇಸ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ತಂಡದ ಬೌಲರ್‌ಗಳು ಕೂಡ ಪರಿಣಾಮ ಬೀರುತ್ತಿಲ್ಲ. ಎಡಗೈ ಸ್ಪಿನ್ನರ್ ಅಕೀಲ್ ಹೊಸೇನ್ ಅವರನ್ನು ಬಿಟ್ಟರೆ ಉಳಿದ ಯಾರಿಗೂ ಎದುರಾಳಿ ಬ್ಯಾಟರ್‌ಗಳನ್ನು ನಿಯಂತ್ರಿಸಲು ಆಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಇತ್ತೀಚಿನ ಏಳು ಪಂದ್ಯಗಳ ಪೈಕಿ ಒಂದರಲ್ಲೂ ಜಯ ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಬಾಂಗ್ಲಾದೇಶ ಕೂಡ ಸಂಕಷ್ಟದಲ್ಲಿದೆ. ಉಪಖಂಡದ ಪಿಚ್‌ನಲ್ಲಿ ಆ ತಂಡ ಪ್ರಭಾವ ಬೀರಬೇಕಾಗಿತ್ತು. ಆದರೆ ತೀವ್ರ ಪೈಪೋಟಿ ಒಡ್ಡಿದರೂ ಜಯ ಮರೀಚಿಕೆ ಆಗುತ್ತಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂಥ ಬಲಿಷ್ಠ ತಂಡಗಳನ ವಿರುದ್ಧ ಜಯ ಗಳಿಸಿ ಟೂರ್ನಿಗೆ ಬಂದಿದ್ದ ತಂಡ ಇಲ್ಲಿ ಪರಿಣಾಮ ಬೀರಲು ವಿಫಲವಾಗಿದೆ. ಮೊಹಮ್ಮದ್ ನಯೀಮ್‌, ಲಿಟನ್ ದಾಸ್‌, ಶಕೀಬ್ ಅಲ್ ಹಸನ್‌, ಮೊಹಮ್ಮದುಲ್ಲ, ಮುಷ್ಫಿಕುರ್ ರಹೀಂ ಮುಂತಾದವರು ಪ್ರತಿಭಾವಂತ ಬ್ಯಾಟರ್‌ಗಳು. ಆದರೆ ಅವರ ಬ್ಯಾಟ್‌ನಿಂದ ನಿರೀಕ್ಷಿತ ಮಟ್ಟದಲ್ಲಿ ರನ್‌ಗಳು ಬರುತ್ತಿಲ್ಲ. ಮೆಕಾಯ್ ಬದಲಿಗೆ ಹೋಲ್ಡರ್‌ ಗಾಯಗೊಂಡಿರುವ ವೇಗದ ಬೌಲರ್ ಒಬೆದ್ ಮೆಕಾಯ್ ಬದಲಿಗೆ ಆಲ್‌ರೌಂಡರ್ ಜೇನಸ್ ಹೋಲ್ಡರ್ ಅವರನ್ನು ವೆಸ್ಟ್ ಇಂಡೀಸ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ವಿಶ್ವಕಪ್ ಟೂರ್ನಿಯ ತಾಂತ್ರಿಕ ಸಮಿತಿ ಈ ಬದಲಾವಣೆಗೆ ಒಪ್ಪಿಗೆ ನೀಡಿದೆ. ಇದನ್ನು ಐಸಿಸಿ ಖಚಿತಪಡಿಸಿದೆ. ಕೋವಿಡ್‌–19ರ ಹಿನ್ನೆಲೆಯಲ್ಲಿ ತಂಡಗಳು ಕರೆದುಕೊಂಡು ಹೋಗುವ ಹೆಚ್ಚುವರಿ ಆಟಗಾರರ ಸಂಖ್ಯೆಯ ಮೇಲೆ ನಿರ್ಬಂಧವಿದೆ. ಹೀಗಾಗಿ ಹೋಲ್ಡರ್ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿದ್ದರು. ಆರಂಭ: ಸಂಜೆ 3.30 (ಭಾರತೀಯ ಕಾಲಮಾನ) ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಟ್ವೆಂಟಿ–20 ರ‍್ಯಾಂಕಿಂಗ್‌ ಬಾಂಗ್ಲಾದೇಶ- 8 ವೆಸ್ಟ್ ಇಂಡೀಸ್- 10 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.