ಅಫ್ಗಾನಿಸ್ತಾನಕ್ಕೆ ಜಯದ ಭರವಸೆ: ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ನಮೀಬಿಯಾ ಅಬುಧಾಬಿ: ಪಾಕಿಸ್ತಾನದ ವಿರುದ್ಧ ಹೋರಾಡಿ ಸೋತ ಅಫ್ಗಾನಿಸ್ತಾನ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಯದ ಹಾದಿಗೆ ಮರಳುವ ಕನಸಿನೊಂದಿಗೆ ಭಾನುವಾರ ಕಣಕ್ಕೆ ಇಳಿಯಲಿದೆ. ಸೂಪರ್‌ 12ರ ಹಂತದ ಎರಡನೇ ಗುಂಪಿನ ಈ ಪಂದ್ಯದಲ್ಲಿ ಮೊಹಮ್ಮದ್ ನಬಿ ಬಳಗಕ್ಕೆ ನಮೀಬಿಯಾ ಎದುರಾಳಿ. ರಶೀದ್ ಖಾನ್‌, ಮುಜೀಬ್ ಉರ್ ರಹಮಾನ್, ಮೊಹಮ್ಮದ್ ನಬಿ ಅವರನ್ನು ಒಳಗೊಂಡ ಪ್ರಬಲ ಸ್ಪಿನ್ನರ್‌ಗಳು ಮತ್ತು ಭರ್ಜರಿ ಹೊಡೆತಗಳನ್ನು ಪ್ರದರ್ಶಿಸುವ ಬ್ಯಾಟರ್‌ಗಳಿರುವ ಅಫ್ಗಾನಿಸ್ತಾನ ಯಾವ ತಂಡಕ್ಕೂ ಸುಲಭವಾಗಿ ಮಣಿಯುವುದಿಲ್ಲ ಎಂಬುದು ಈಗಾಗಲೇ ಅನೇಕ ಬಾರಿ ಸಾಬೀತಾಗಿದೆ. ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ನಮೀಬಿಯಾ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದಿದೆ.ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ ಅಮೋಘ ಬೌಲಿಂಗ್‌ ಮತ್ತು ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿರುವ ನಮೀಬಿಯಾ ಮತ್ತೊಂದು ಗೆಲುವಿನ ಹಂಬಲದಲ್ಲಿದೆ. ಆದರೆ ಅಫ್ಗಾನ್‌ ವಿರುದ್ಧ ಪಾರಮ್ಯ ಮೆರೆಯಬೇಕಾದರೆ ಗೆರಾರ್ಡ್‌ ಎರಾಸ್ಮಸ್ ಬಳಗ ಸವಾಲುಗಳನ್ನು ಮೆಟ್ಟಿನಿಲ್ಲಬೇಕಾಗಿದೆ. ಬ್ಯಾಟಿಂಗ್‌ಗೆ ಮೊನಚು ತುಂಬಿ ಅಷ್ಟೊಂದು ಪರಿಣಾಮಕಾರಿಯಲ್ಲದ ಅಫ್ಗಾನಿಸ್ತಾನದ ವೇಗದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಸಾಕಷ್ಟು ರನ್ ಕಲೆ ಹಾಕಲು ಸಾಧ್ಯವಾದರೆ ಒತ್ತಡ ಹೇರುವಲ್ಲಿ ನಮೀಬಿಯಾ ಯಶಸ್ವಿಯಾಗಬಹುದು. ಒಂದೇ ಅಂಗಣದಲ್ಲಿ ಮೂರು ಪಂದ್ಯಗಳನ್ನು ಆಡಿರುವುದರಿಂದ ಇಲ್ಲಿನ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಅವಕಾಶವೂ ತಂಡಕ್ಕಿದೆ. ನಬಿ ಬಳಗಕ್ಕೆ ಇಮ್ರಾನ್ ಅಭಿನಂದನೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ದಿಟ್ಟ ಆಟವಾಡಿದ ಅಫ್ಗಾನಿಸ್ತಾನ ತಂಡವನ್ನು ಪಾಕ್ ಪ್ರಧಾನಿ ಮತ್ತು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅಭಿನಂದಿಸಿದ್ದಾರೆ. ಯುದ್ಧಪೀಡಿತ ದೇಶದ ಕ್ರಿಕೆಟ್ ತಂಡಕ್ಕೆ ಭವ್ಯ ಭವಿಷ್ಯವಿದೆ ಎಂದು ಅವರು ಶ್ಲಾಘಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊಹಮ್ಮದ್ ನಬಿ ಮತ್ತು ಗುಲ್ಬದಿನ್ ನಯೀಬ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಅಫ್ಗಾನಿಸ್ತಾನ 147 ರನ್ ಕಲೆ ಹಾಕಿತ್ತು. ನಂತರ ಪಾಕಿಸ್ತಾನವನ್ನು ಬೌಲರ್‌ಗಳು ಕಾಡಿದ್ದರು. 19ನೇ ಓವರ್‌ನಲ್ಲಿ ಆಸಿಫ್ ಅಲಿ ನಾಲ್ಕು ಸಿಕ್ಸರ್ ಸಿಡಿಸಿ ಆತಂಕ ದೂರ ಮಾಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.