ಉಮ್ರಿಗರ್, ಮಂತ್ರಿ ಭೇಟಿಯಾದ ಆ ದಿನ... ಮುಂಬೈ: ‘ಯಾರೊಂದಿಗೆ ಮಾತನಾಡಬೇಕು ಎಂದು ಕನಸು ಕಂಡಿದ್ದೆನೋ ಅವರು ಅಂದು ಸುಲಭವಾಗಿ ನನಗೆ ಸಿಕ್ಕಿದರು. ಆಗ ಇಬ್ಬರೂ ನೀಡಿದ ಸಲಹೆ ವೃತ್ತಿಜೀವನದಲ್ಲಿ ನನಗೆ ತುಂಬ ಸಹಕಾರಿಯಾಯಿತು...’ ತಮ್ಮ ಅಮೋಘ ಸ್ಕ್ವೇರ್ ಕಟ್‌ಗಳಿಗೆ ಹೆಸರವಾಸಿಯಾಗಿರುವ, ಭಾರತದ ಪರ 91 ಟೆಸ್ಟ್ ಪಂದ್ಯಗಳನ್ನು ಆಡಿರುವ ಕರ್ನಾಟಕದ ಜಿ.ಆರ್.ವಿಶ್ವನಾಥ್ (ವಿಶಿ)ಶನಿವಾರ ಆಡಿದ ಮಾತು ಇದು. ಇಲ್ಲಿನ ಎಂಸಿಎ–ಬಿಕೆಸಿ ಅಂಗಣದಲ್ಲಿ ಮಾಧವ ಮಂತ್ರಿ ಸ್ಮಾರಕ ಏಕದಿನ ಕ್ರಿಕೆಟ್ ಲೀಗ್ ಉದ್ಘಾಟಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ವಿಶಿ ಅವರು ಮಾಧವ ಮಂತ್ರಿ ಮತ್ತು ಪಾಲಿ ಉಮ್ರಿಗರ್ ಅವರನ್ನು ಭೇಟಿಯಾದ ದಿನದ ಬಗ್ಗೆ ವಿವರಿಸಿದರು. 1968-69ರಲ್ಲಿ ಬ್ರೆಬಾರ್ನ್ ಕ್ರೀಡಾಂಗಣದಲ್ಲಿ ನಡೆದ ಮೈಸೂರು (ಈಗ ಕರ್ನಾಟಕ) ಮತ್ತು ಬಾಂಬೆ (ಈಗಿನ ಮುಂಬೈ) ತಂಡಗಳ ನಡುವಿನ ರಣಜಿ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಗಣ್ಯರ ಆಸನದಲ್ಲಿ ಕುಳಿತಿದ್ದ ಮಾಧವ ಮಂತ್ರಿ ಮತ್ತು ಪಾಲಿ ಉಮ್ರಿಗರ್ ಅವರನ್ನು ಮೊದಲ ಬಾರಿ ನೋಡಿದ್ದಾಗಿ ವಿಶಿ ಹೇಳಿದರು. ‘ಮಾಧವ ಮಂತ್ರಿ ಮತ್ತು ಪಾಲಿ ಕಾಕ ಪಂದ್ಯವನ್ನು ವೀಕ್ಷಿಸುತ್ತಿರುವುದನ್ನು ಕಂಡು ನನಗೆ ಆತಂಕವಾಗಿತ್ತು. ಶ್ರೇಷ್ಠ ಆಟಗಾರರಾಗಿದ್ದ ಅವರಿಬ್ಬರ ಮುಂದೆ ಆಡುವುದಾದರೂ ಹೇಗೆ ಎಂಬ ಅಳುಕು ಇತ್ತು. ಏನೇ ಆಗಲಿ, ಆ ದಿನ ಅವರಿಬ್ಬರನ್ನು ಭೇಟಿಯಾಗಬೇಕು ಎಂದುಕೊಂಡಿದ್ದೆ. ಅವರೊಂದಿಗೆ ಮಾತನಾಡುವುದು ಬಹಳ ಕಾಲದ ಕನಸಾಗಿತ್ತು. ದಿನದಾಟ ಮುಗಿದ ನಂತರ ಅವರು ಅಂಗಣಕ್ಕೆ ಇಳಿದಿದ್ದರು. ಅಲ್ಲಿ ಅವರನ್ನು ಭೇಟಿಯಾದೆ’ ಎಂದು ವಿಶಿ ಹೇಳಿದರು. ‘ನಿಮ್ಮನ್ನು ಭೇಟಿಯಾದ ಈ ದಿನವನ್ನು ನಾನು ಮರೆಯಲಾರೆ ಎಂದು ಅವರ ಬಳಿ ಹೇಳಿದೆ. ಅದಕ್ಕೆ ಉತ್ತರಿಸಿದ ಅವರು, ನಿಮ್ಮ ಕ್ರಿಕೆಟ್ ಜೀವನ ಈಗಾಗಲೇ ಆರಂಭವಾಗಿದೆ. ನಿಮ್ಮ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆಡುವಾಗ ಗಾಬರಿಯಾಗುವುದು ಬೇಡ. ಸಹಜವಾಗಿ ಬ್ಯಾಟಿಂಗ್ ಮಾಡಬೇಕು, ಸುಮ್ಮನೇ ವಿಕೆಟ್ ಕಳೆದುಕೊಳ್ಳಬಾರದು ಎಂಬ ಸಲಹೆ ನೀಡಿದರು’ ಎಂದು ವಿಶ್ವನಾಥ್ ನೆನಪಿಸಿಕೊಂಡರು. 72 ವರ್ಷದ ವಿಶ್ವನಾಥ್ ಟೆಸ್ಟ್ ಕ್ರಿಕೆಟ್‌ನಲ್ಲಿ 14 ಶತಕ ಗಳಿಸಿದ್ದಾರೆ. 1974–75ರಲ್ಲಿ ಕ್ಲೈವ್ ಲಾಯ್ಡ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ವಿಶ್ವನಾಥ್ ಅವರು ಅಜೇಯ 97 ರನ್ ಗಳಿಸಿದ್ದರು. ಆ್ಯಂಡಿ ರಾಬರ್ಟ್ಸ್ ಮತ್ತು ಮೈಕೆಲ್ ಹೋಲ್ಡಿಂಗ್ ಅವರಂಥ ಶ್ರೇಷ್ಠ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಆ ಇನಿಂಗ್ಸ್‌ ವಿಶೇಷವಾಗಿತ್ತು ಎಂದು ಅವರು ಹೇಳಿದರು. ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವಿಜಯ ಪಾಟೀಲ್‌, ಅಪೆಕ್ಸ್ ಸಮಿತಿ ಸದಸ್ಯ ಅಜಿಂಕ್ಯ ನಾಯಕ್‌, ನದೀಮ್ ಮೆನನ್‌ ಮತ್ತು ಅಭಯ್ ಹಡಪ್‌ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.