-20 ವಿಶ್ವಕಪ್: ದಕ್ಷಿಣ ಆಫ್ರಿಕಾ–ಶ್ರೀಲಂಕಾ ಮುಖಾಮುಖಿ ಶಾರ್ಜಾ: ಬ್ಲ್ಯಾಕ್‌ ಲಿವ್ಸ್ ಮ್ಯಾಟರ್‌ಗೆ ಸಂಬಂಧಿಸಿದ ವಿವಾದವನ್ನು ಸುಸೂತ್ರವಾಗಿ ನಿಭಾಯಿಸಿರುವ ದಕ್ಷಿಣ ಆಫ್ರಿಕಾ ತಂಡ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಪಂದ್ಯದಲ್ಲಿ ಶನಿವಾರ ಶ್ರೀಲಂಕಾವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಈ ವರೆಗೆ ಉತ್ತಮ ಸಾಮರ್ಥ್ಯ ತೋರುತ್ತ ಬಂದಿರುವ ಉಭಯ ತಂಡಗಳ ಈ ಹಣಾಹಣಿ ಕುತೂಹಲ ಕೆರಳಿಸಿದೆ. ಬೌಲಿಂಗ್‌ ವಿಭಾಗವನ್ನು ಹೆಚ್ಚು ನೆಚ್ಚಿಕೊಂಡಿರುವ ಶ್ರೀಲಂಕಾ ಎದುರಾಳಿ ತಂಡದ ಫಫ್‌ ಡು ಪ್ಲೆಸಿ, ರೀಜಾ ಹೆನ್ರಿಕ್ಸ್‌, ರಸಿ ವ್ಯಾನ್ ಡೆರ್ ಡುಸೆನ್, ಏಡನ್ ಮರ್ಕರಮ್, ಡೇವಿಡ್ ಮಿಲ್ಲರ್ ಮುಂತಾದವರನ್ನು ನಿಯಂತ್ರಿಸುವುದೇ ಎಂಬುದು ಈ ಪಂದ್ಯದ ಪ್ರಮುಖ ಅಂಶ. ಸ್ಪಿನ್ನರ್‌ಗಳಾದ ವಾನಿಂದು ಹಸರಂಗ ಮತ್ತು ಮಹೀಶ್ ತೀಕ್ಷಣ ಅವರನ್ನು ಎಚ್ಚರದಿಂದ ಎದುರಿಸದೇ ಹೋದರೆ ದಕ್ಷಿಣ ಆಫ್ರಿಕಾ ಆಪತ್ತಿಗೆ ಸಿಲುಕಲಿದೆ. ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಮೂರು ವಿಕೆಟ್ ಉರುಳಿಸಿರುವ ಡ್ವೇನ್ ಪ್ರಿಟೋರಿಯಸ್ ಈಗ ಉತ್ತಮ ಲಯದಲ್ಲಿದ್ದಾರೆ ಇದು ದಕ್ಷಿಣ ಆಫ್ರಿಕಾ ತಂಡದಲ್ಲಿ ಭರವಸೆ ಮೂಡಿಸಿದೆ. ಪ್ರಿಟೋರಿಯಸ್‌ಗೆ ಬಲ ತುಂಬಲು ಅನುಭವಿಗಳಾದ ಕಗಿಸೊ ರಬಾಡ ಮತ್ತು ಆ್ಯನ್ರಿಚ್ ನಾರ್ಕಿಯಾ ಇದ್ದಾರೆ. ಕೇಶವ್ ಮಹಾರಾಜ್ ಮತ್ತು ತಬ್ರೇಜ್ ಶಂಸಿ ಅವರನ್ನು ಒಳಗೊಂಡ ಸ್ಪಿನ್ ವಿಭಾಗವೂ ತಂಡಕ್ಕೆ ಶಕ್ತಿ ತುಂಬಿದೆ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಸೋತಿರುವ ಶ್ರೀಲಂಕಾ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ಚರಿತ್ ಅಸಲಂಕ, ವಿಕೆಟ್ ಕೀಪರ್ ಕುಶಾಲ್ ಪೆರೇರ, ಪಥುಮ್ ನಿಸಾಂಕ ಮತ್ತು ಆವಿಷ್ಕ ಫೆರ್ನಾಂಡೊ ಅವರ ಮೇಲೆ ತಂಡದ ನಿರೀಕ್ಷೆ ಇದೆ. ಭಾನುಕ ರಾಜಪಕ್ಷೆ ಮತ್ತು ವಾನಿಂದು ಹಸರಂಗ ಕೂಡ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಎಲ್ಲರ ಕಣ್ಣು ಡಿ’ಕಾಕ್ ಮೇಲೆ ಬ್ಲ್ಯಾಕ್ ಲಿವ್ಸ್ ಮ್ಯಾಟರ್ ಅಭಿಯಾನಕ್ಕೆ ಬೆಂಬಲ ಸೂಚಿಸುವುದಕ್ಕಾಗಿ ಮೊಣಕಾಲೂರಲು ನಿರಾಕರಿಸಿದ ಕ್ವಿಂಟನ್ ಡಿಕಾಕ್ ಮೇಲೆ ಈ ಪಂದ್ಯದ ಸಂದರ್ಭದಲ್ಲಿ ಎಲ್ಲರ ಕಣ್ಣು ನೆಡಲಿದೆ. ವೆಸ್ಟ್ ಇಂಡೀಸ್ ಎದುರಿನ ಪಂದ್ಯದ ಸಂದರ್ಭದಲ್ಲಿ ತಂಡದ ಆಟಗಾರರೆಲ್ಲ ಮೊಣಕಾಲೂರಿದ್ದರು. ಆದರೆ ಡಿ’ಕಾಕ್ ಇದಕ್ಕೆ ನಿರಾಕರಿಸಿದ್ದರು. ಈ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಕ್ಷಮೆ ಕೋರಿದ್ದರು. ಮುಂದಿನ ಪಂದ್ಯದಲ್ಲಿ ಅಭಿಯಾನಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದ್ದರು. ಆರಂಭ: ಸಂಜೆ 3.30 (ಭಾರತೀಯ ಕಾಲಮಾನ) ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.