, 1st T20| ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 50 ರನ್‌ಗಳ ಜಯ ಸೌಥಾಂಪ್ಟನ್‌: ಇಂಗ್ಲೆಂಡ್‌ ಎದುರು ಸೌಥಾಂಪ್ಟನ್‌ನಲ್ಲಿ ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 50 ರನ್‌ಗಳಿಂದ ಗೆದ್ದಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 1–0 ಅಂತರದ ಮುನ್ನಡೆ ಸಾಧಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಶರ್ಮ ಬಳಗ ಹಾರ್ದಿಕ್‌ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್‌ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 198 ರನ್‌ ಗಳಿಸಿತು. ಹಾರ್ದಿಕ್ (51 ರನ್, 33 ಎ, 4X6, 6X1) ಅರ್ಧಶತಕದ ಮೂಲಕ ಮಿಂಚಿದರು. ಈ ಮೂಲಕ ಅವರು ಅಂತರರಾಷ್ಟ್ರಿಯ ಟಿ20ಯಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ಸೂರ್ಯಕುಮಾರ್ (39 ರನ್, 19 ಎ, 4X4, 6X2) ಮತ್ತು ದೀಪಕ್‌ ಹೂಡಾ (33 ರನ್, 17 ಎ, 4X3, 6X2) ಬಿರುಸಿನ ಆಟವಾಡಿದರು. ಈ ವೇಳೆ ಜತೆಯಾದ ಹೂಡಾ ಮತ್ತು ಸೂರ್ಯಕುಮಾರ್‌, ಎದುರಾಳಿ ಬೌಲರ್‌ಗಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಹೂಡಾ ಔಟಾದ ಬಳಿಕ ಬಂದ ಪಾಂಡ್ಯ, ಆಕ್ರಮಣಕಾರಿ ಆಟವಾಡಿದರು. ಸೂರ್ಯಕುಮಾರ್‌ ಜತೆ ನಾಲ್ಕನೇ ವಿಕೆಟ್‌ಗೆ 37 ರನ್‌ ಹಾಗೂ ಐದನೇ ವಿಕೆಟ್‌ಗೆ ಅಕ್ಷರ್‌ ಪಟೇಲ್‌ (17, 12ಎ) ಜತೆ 45 ರನ್‌ಗಳ ಜತೆಯಾಟ ನೀಡಿದರು. ಕೊನೆಯ ಮೂರು ಓವರ್‌ಗಳಲ್ಲಿ ಭಾರತ 20 ರನ್‌ ಮಾತ್ರ ಗಳಿಸಿತು. ದಿನೇಶ್‌ ಕಾರ್ತಿಕ್‌ ನಿರಾಸೆ ಮೂಡಿಸಿದರು. ಹೀಗಾಗಿ ಸ್ಕೋರ್‌ 200ರ ಗಡಿ ದಾಟಲಿಲ್ಲ. ಆದರೆ, ಭಾರತ ನೀಡಿದ ಸವಾಲಿನ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್‌ ತಂಡ 19.3 ಓವರ್‌ಗಳಲ್ಲಿ 148ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲುಂಡಿತು. ಮೋಯಿನ್‌ ಅಲಿ 36(20), ಹ್ಯಾರಿ ಬ್ರೂಕ್‌ 28 (23) ಗಳಿಸಿದರು. ಕ್ರಿಸ್‌ ಜೋರ್ಡನ್‌ 26 (17), ದವಿದ್‌ ಮಿಲನ್‌ 21 (14) ರನ್‌ಗಳ ಮೂಲಕ ತಂಡಕ್ಕೆ ನೆರವಾದರಾದರೂ, ಇನ್ನುಳಿದ ಆಟಗಾರರಿಂದ ಉತ್ತಮ ಆಟ ಮೂಡಿಬರಲಿಲ್ಲ. ಬ್ಯಾಟಿಂಗ್‌ ವೇಳೆ ಸಿಡಿದಿದ್ದ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ವೇಳೆ 4 ವಿಕೆಟ್‌ ಪಡೆದು ಮಿಂಚಿದರು. ಹರ್ಷದೀಪ್‌ ಸಿಂಗ್‌ ಮತ್ತು ಯುಜುವೇಂದ್ರ ಚಹಾಲ್‌ ತಲಾ ಎರಡು ವಿಕೆಟ್‌ ಪಡೆದರು. ಅಂತಿಮವಾಗಿ ಭಾರತದ ಪ್ರಾಬಲ್ಯದ ಎದುರು ಇಂಗ್ಲೆಂಡ್‌ 50 ರನ್‌ಗಳ ಸೋಲು ಅನುಭವಿಸಬೇಕಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.