ಟೆಸ್ಟ್‌ ಸರಣಿಗೆ ತಂಡ: ಹನುಮ ವಿಹಾರಿಗಿಲ್ಲ ಸ್ಥಾನ ನವದೆಹಲಿ: ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೆ ಪ್ರಕಟಿಸಿದ ಭಾರತ ತಂಡದಲ್ಲಿ ಹನುಮ ವಿಹಾರಿ ಅವರಿಗೆ ಸ್ಥಾನ ಸಿಗಲಿಲ್ಲ. ವೇಗಿ ಪ್ರಸಿದ್ಧ ಕೃಷ್ಣ ಸೇರಿದಂತೆ ಕರ್ನಾಟಕದ ಮೂವರು ತಂಡದಲ್ಲಿದ್ದಾರೆ. ಕಾನ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದು ಮುಂಬೈಯಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯವಾಗಲಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಶುಕ್ರವಾರ ತಿಳಿಸಿದೆ. ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಅವರಿಗೆ ಕೂಡ ವಿಶ್ರಾಂತಿ ನೀಡಲು ಮಂಡಳಿ ನಿರ್ಧರಿಸಿದ್ದು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಸೆಣಸಿದ ನಂತರ ನ್ಯೂಜಿಲೆಂಡ್ ತಂಡ ನೇವಾಗಿ ಭಾರತಕ್ಕೆ ಬರಲಿದೆ. ಉಭಯ ತಂಡಗಳು ಜೂನ್‌ನಲ್ಲಿ ಸೌತಾಂಪ್ಟನ್‌ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಕೊನೆಯದಾಗಿ ಸೆಣಸಿದ್ದವು. ಆಗ ವಿರಾಟ್ ಕೊಹ್ಲಿ ನಾಯಕರಾಗಿದ್ದರು. ನವೆಂಬರ್ 25ರಂದು ಟೆಸ್ಟ್ ಸರಣಿ ಆರಂಭವಾಗಲಿದೆ. ಅದಕ್ಕೂ ಮೊದಲು ಮೂರು ಟ್ವೆಂಟಿ–20 ಪಂದ್ಯಗಳಲ್ಲಿ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಗಳು ನವೆಂಬರ್ 17, 19 ಮತ್ತು 21ರಂದು ನಡೆಯಲಿವೆ. ಮೊದಲ ಟೆಸ್ಟ್‌ಗೆ ತಂಡ: ಅಜಿಂಕ್ಯ ರಹಾನೆ (ನಾಯಕ), ಕೆ.ಎಲ್‌.ರಾಹುಲ್, ಮಯಂಕ್ ಅಗರವಾಲ್‌, ಚೇತೇಶ್ವರ್ ಪೂಜಾರ (ಉಪನಾಯಕ), ಶುಭಮನ್ ಗಿಲ್‌, ಶ್ರೇಯಸ್ ಅಯ್ಯರ್‌, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್‌), ಕೆ.ಎಸ್‌.ಭರತ್‌ (ವಿಕೆಟ್ ಕೀಪರ್‌), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್‌, ಅಕ್ಷರ್ ಪಟೇಲ್‌, ಜಯಂತ್ ಯಾದವ್‌, ಇಶಾಂತ್ ಶರ್ಮಾ, ಉಮೇಶ್ ಯಾದವ್‌, ಮೊಹಮ್ಮದ್ ಸಿರಾಜ್‌, ಪ್ರಸಿದ್ಧ ಕೃಷ್ಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.