ಕೆಎಸ್‌ಸಿಎ: ಎಚ್‌ಸಿಎ ತಂಡಕ್ಕೆ ಗೆಲುವು ಹುಬ್ಬಳ್ಳಿ: ಅಮೋದ್‌ ಕಾಳುವೆ (77) ಮತ್ತು ಕೌಸ್ತುಬ್ ಪಿ.ಎಲ್‌. (59) ಅರ್ಧಶತಕದ ನೆರವಿನಿಂದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ (ಎಚ್‌ಸಿಎ) ‘ಎ’ ತಂಡ, ಕೆಎಸ್‌ಸಿಎ ಧಾರವಾಡ ವಲಯದ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ 123 ರನ್‌ಗಳ ಗೆಲುವು ಪಡೆಯಿತು. ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಚ್‌ಸಿಎ 49.5 ಓವರ್‌ಗಳಲ್ಲಿ 10 ವಿಕೆಟ್‌ ನಷ್ಟಕ್ಕೆ 293 ರನ್ ಕಲೆಹಾಕಿತ್ತು. ಎದುರಾಳಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ ‘ಬಿ’ ತಂಡ 33.2 ಓವರ್‌ಗಳಲ್ಲಿ 170 ರನ್‌ ಗಳಿಸಿ ಆಲೌಟ್‌ ಆಯಿತು. ಎಚ್‌ಸಿಎ ತಂಡದ ಮಹಾಂತೇಶ ಕಪ್ಪಣ್ಣನವರ ಮೂರು ವಿಕೆಟ್‌ ಪಡೆದರು. ಆರ್‌ಐಎಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ ‘ಎ’ ತಂಡ 192 ರನ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಈ ತಂಡ ಚಿರಾ‌ಗ ನಾಯಕ್ (100) ಶತಕದ ಬಲದಿಂದ 50 ಓವರ್‌ಗಳಲ್ಲಿ 314 ರನ್‌ ಗಳಿಸಿತ್ತು. ಎದುರಾಳಿ ಬೆಳಗಾವಿಯ ಆನಂದ ಕ್ರಿಕೆಟ್‌ ಅಕಾಡೆಮಿ ತಂಡ 27.4 ಓವರ್‌ಗಳಲ್ಲಿ 185 ರನ್‌ ಗಳಿಸಿ ಆಲೌಟ್ ಆಯಿತು. ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಸಿಐ ಬೆಳಗಾವಿ ತಂಡ 105 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಈ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 291 ರನ್‌ ಕಲೆಹಾಕಿತ್ತು. ಎದುರಾಳಿ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ‘ಬಿ’ ತಂಡ 41 ಓವರ್‌ಗಳಲ್ಲಿ 186 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. ಸಿಸಿಐ ತಂಡದ ಅಮನ್‌ ಖಾನ್‌ ಆರು ವಿಕೆಟ್‌ಗಳನ್ನು ಕಬಳಿಸಿದರು. ಗೆಲುವು ಪಡೆದ ಮೂರೂ ತಂಡಗಳು ತಲಾ ನಾಲ್ಕು ಅಂಕಗಳನ್ನು ಗಳಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.