ಹುಬ್ಬಳ್ಳಿ: ರನ್‌ರೇಟ್‌ ಅದೃಷ್ಟ; ಸೆಮಿಫೈನಲ್‌ಗೆ ಬಿಎಸ್‌ಸಿ ಹುಬ್ಬಳ್ಳಿ: ಉತ್ತಮ ರನ್‌ರೇಟ್ ಹೊಂದಿದ್ದ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ (ಬಿಎಸ್‌ಸಿ), ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ಆಯೋಜಿಸಿರುವ 14 ವರ್ಷದ ಒಳಗಿನವರ ಲೀಲಾವತಿ ಪ್ಯಾಲೇಸ್ ಕಪ್‌ ಅಂತರ ಕ್ಯಾಂಪ್ ಕ್ರಿಕೆಟ್‌ ಟೂರ್ನಿಯಲ್ಲಿ ಗುರುವಾರ ಸೆಮಿಫೈನಲ್‌ ಪ್ರವೇಶಿಸಿತು. ‘ಡಿ’ ಗುಂಪಿನಲ್ಲಿದ್ದ ಬಿಎಸ್‌ಸಿ, ಶ್ರೀದುರ್ಗಾ ಸ್ಪೋರ್ಟ್ಸ್‌ ಅಕಾಡೆಮಿ ತಂಡ ಮತ್ತು ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ತಲಾ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿದ್ದವು. ಆದ್ದರಿಂದ ನಾಕೌಟ್‌ ಹಾದಿ ಯಾರಿಗೆ ಎನ್ನುವ ಕುತೂಹಲ ಮೂಡಿತ್ತು. ಗುರುವಾರ ನಡೆದ ಮಹತ್ವದ ಪಂದ್ಯದಲ್ಲಿ ಬಿಎಸ್‌ಸಿ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಧಾರವಾಡದ ವಿಎಂಸಿಎ 29.4 ಓವರ್‌ಗಳಲ್ಲಿ 86 ರನ್‌ ಗಳಿಸಿತ್ತು. ಈ ಗುರಿಯನ್ನು ಬಿಎಸ್‌ಸಿ ತಂಡ 13.4 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ತಲುಪಿತು. ಶನಿವಾರ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆಯುವ ಸೆಮಿಫೈನಲ್‌ನಲ್ಲಿ ಬಿಎಸ್‌ಸಿ ತಂಡ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ (ಬೆಳಿಗ್ಗೆ 8.30ಕ್ಕೆ) ಎದುರು ಪೈಪೋಟಿ ನಡೆಸಲಿದೆ. ಮಧ್ಯಾಹ್ನ 1.20ಕ್ಕೆ ನಡೆಯುವ ಇನ್ನೊಂದು ಸೆಮಿಫೈನಲ್‌ನಲ್ಲಿ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ–ಚಾಂಪಿಯನ್ಸ್‌ ನೆಟ್‌ ಹುಬ್ಬಳ್ಳಿ ಪಂದ್ಯವಾಡಲಿವೆ. ಕೊನೆಯ ಲೀಗ್‌ ಪಂದ್ಯದಲ್ಲಿ ಶ್ರೀದುರ್ಗಾ ಸ್ಪೋರ್ಟ್ಸ್‌ ಅಕಾಡೆಮಿ ತಂಡ, ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ವಿರುದ್ಧ ಮೂರು ವಿಕೆಟ್‌ಗಳ ಗೆಲುವು ಸಾಧಿಸಿದರೂ ಸೆಮಿಫೈನಲ್‌ ಪ್ರವೇಶಕ್ಕೆ ಅನುಕೂಲವಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.