ಮೊದಲ ಟಿ20 ಇಂದು: ವಿಶ್ವಕಪ್ ಟೂರ್ನಿಗೆ ಸಿದ್ಧತೆ ಶುರು ಸೌತಾಂಪ್ಟನ್: ಕೋವಿಡ್‌ನಿಂದ ಚೇತರಿಸಿಕೊಂಡು ಮರಳಿರುವ ರೋಹಿತ್ ಶರ್ಮಾ ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಶತಕಗಳನ್ನು ಸಿಡಿಸಿದ್ದ ಜೋಸ್ ಬಟ್ಲರ್ ಆತಿಥೇಯ ತಂಡದ ನಾಯಕತ್ವ ವಹಿಸಲಿದ್ದಾರೆ. ಉಭಯ ತಂಡಗಳಿಗೂ ಮುಂಬರಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಳಗವನ್ನು ಸಿದ್ಧಗೊಳಿಸಲು ಈ ಟೂರ್ನಿಯು ಪೂರ್ವಸಿದ್ಧತಾ ವೇದಿಕೆಯಾಗಲಿದೆ.ಅಲ್ಲದೇ ತಂಡದ ಆಯ್ಕೆ ಪ್ರಕ್ರಿಯೆಯ ಭಾಗವೂ ಆಗಲಿದೆ. ಟೆಸ್ಟ್ ಪಂದ್ಯದಲ್ಲಿ ಆಡಿದ್ದ ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಅವರಿಗೆ ಮೊದಲ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ. ಎರಡನೇ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.ಆದ್ದರಿಂದ ಅವಕಾಶ ಪಡೆಯಲಿರುವ ಯುವ ಆಟಗಾರರಾದ ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಆವೇಶ್ ಖಾನ್ ಅವರು ವಿದೇಶಿ ಅಂಗಳದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸೂಕ್ತ ಸಮಯವಿದು. ಐಪಿಎಲ್ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಸ್ಥಿರವಾದ ಆಟವಾಡಿರುವ ದಿನೇಶ್ ಕಾರ್ತಿಕ್ ಕಣಕ್ಕಿಳಿಯುವುದು ಖಚಿತ. ಆದರೆ, ಕೀಪಿಂಗ್ ಹೊಣೆ ಇಶಾನ್ ಕಿಶನ್ ಅವರಿಗೆ ಲಭಿಸುವ ಸಾಧ್ಯತೆ ಹೆಚ್ಚು. ಅಲ್ಲದೇ ನಾಯಕ ರೋಹಿತ್ ಜೊತೆ ಇನಿಂಗ್ಸ್ ಕೂಡ ಆರಂಭಿಸುವ ಹೊಣೆ ಕೂಡ ನಿಭಾಯಿಸಬೇಕಿದೆ. ಇಂಗ್ಲೆಂಡ್ ತಂಡದಲ್ಲಿ ಆಲ್‌ರೌಂಡರ್ ಮೋಯಿನ್ ಅಲಿ, ಜೇಸನ್ ರಯ್ ಮತ್ತು ಡೇವಿಡ್ ಮಲಾನ್ ಅವರ ಮೇಲೆ ಹೆಚ್ಚಿನ ಭರವಸೆ ಇದೆ. ಬೆನ್ ಸ್ಟೋಕ್ಸ್ ನಾಯಕತ್ವದ ತಂಡವು ಭಾರತದ ವಿರುದ್ಧದ ಟೆಸ್ಟ್‌ನಲ್ಲಿ ಜಯಿಸಿರುವುದು ಚುಟುಕು ಕ್ರಿಕೆಟ್ ತಂಡದ ಆಟಗಾರರ ಹುಮ್ಮಸ್ಸು ಇಮ್ಮಡಿಸುವಂತೆ ಮಾಡಿದೆ. ಏಯಾನ್ ಮಾರ್ಗನ್ ಈಚೆಗೆ ನಿವೃತ್ತಿ ಘೋಷಿಸಿದ್ದರು. ಆದ್ದರಿಂದ ಬಟ್ಲರ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಭಾರತಕ್ಕೆ 16 ಪಂದ್ಯಗಳು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು 16 ಚುಟುಕು ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಈ ಎಲ್ಲ ಪಂದ್ಯಗಳಲ್ಲಿ ಆಡುವವರು ವಿಶ್ವಕಪ್‌ ನಲ್ಲಿ ಆಡುವ ತಂಡಕ್ಕೆ ಆಯ್ಕೆಯಾಗುವತ್ತ ಚಿತ್ತ ನೆಟ್ಟಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಮೂರು, ಜುಲೈ 29ರಿಂದ ಆಗಸ್ಟ್ 7ರವರೆಗೆ ವೆಸ್ಟ್ ಇಂಡೀಸ್ ಎದುರು ಐದು, ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ನಡಯೆಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಐದು ಮತ್ತು ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳು ನಡೆಯಲಿವೆ. ತಂಡಗಳು ಭಾರತ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ. ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್ ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಮೋಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಟೈಮಲ್ ಮಿಲ್ಸ್, ಮ್ಯಾಥ್ಯೂ ಪಾರ್ಕಿನ್ಸನ್, ಜೇಸನ್ ರಾಯಕ್, ಫಿಲ್ ಸಾಲ್ಟ್, ರೀಸ್ ಟಾಪ್ಲಿ, ಡೇವಿಡ್ ವಿಲಿ. ಪಂದ್ಯ ಆರಂಭ: ರಾತ್ರಿ 10.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.