ಕ್ಯಾಚ್ ಕೈಚೆಲ್ಲಿದ್ದಕ್ಕಾಗಿ ಅಭಿಮಾನಿಗಳ ಕ್ಷಮೆಯಾಚಿಸಿದ ಹಸನ್ ಅಲಿ ಕರಾಚಿ (ಪಿಟಿಐ): ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಹಸನ್ ಅಲಿ ಅವರು ಈಚೆಗೆ ನಡೆದ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕ್ಯಾಚ್ ಕೈಚೆಲ್ಲಿದ್ದಕ್ಕಾಗಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್‌ನ 19ನೇ ಓವರ್‌ನಲ್ಲಿ ಅಲಿ ಅವರು ಮ್ಯಾಥ್ಯೂ ವೇಡ್ ಅವರ ಕ್ಯಾಚ್ ಕೈಚೆಲ್ಲಿದ್ದರು. ನಂತರದ ಮೂರೂ ಎಸೆತಗಳಲ್ಲಿ ವೇಡ್ ಸಿಕ್ಸರ್ ಬಾರಿಸಿ ತಮ್ಮ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು. ಶಾಹೀನ್ ಆಫ್ರಿದಿ ಬೌಲಿಂಗ್‌ ಮಾಡಿದ್ದ ಆ ಓವರ್‌ನಲ್ಲಿ ಅಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಪಾಕ್ ಪಂದ್ಯದಲ್ಲಿ ಸೋತ ನಂತರ ಅಲಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಮಹಾಪೂರ ಹರಿದಿದ್ದವು. ಕೆಲವು ದಿಗ್ಗಜ ಕ್ರಿಕೆಟಿಗರು ಅವರ ಪರವಾಗಿ ನಿಂತಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಅಲಿ, ‘ನನಗೆ ಗೊತ್ತಿದೆ ತಮಗೆಲ್ಲರಿಗೂ ಬಹಳ ಬೇಸರವಾರಿಗೆ. ನಿಮ್ಮೆಲ್ಲರ ನಿರೀಕ್ಷೆಯನ್ನು ಈಡೇರಿಸಲು ನಮ್ಮಿಂದ ಸಾಧ್ಯವಾಗಿಲ್ಲ. ನಿಮಗಿಂತಲೂ ಹೆಚ್ಚು ಬೇಸರ ನನಗಾಗಿದೆ. ನನ್ನಿಂದ ನಿಮಗಿರುವ ನಿರೀಕ್ಷೆಯಲ್ಲಿ ಒಂದಿನಿತೂ ಕಡಿಮೆ ಮಾಡಬೇಡಿ. ಕಠಿಣ ಶ್ರಮವಹಿಸಿ ಬೆಳೆಯುತ್ತೇನೆ. ಪಾಕಿಸ್ತಾನ ತಂಡವನ್ನು ಉನ್ನತ ಹಂತದವರೆಗೂ ಪ್ರತಿನಿಧಿಸಿ, ನಿಮ್ಮ ನಿರೀಕ್ಷೆಗಳನ್ನು ಈಡೇರಿಸುವೆ‘ ಎಂದಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ವಿಜಯದಲ್ಲಿ ಅಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.