ಆಟಗಾರರ ಡಿಕ್ಕಿ, ಮಿದುಳಿಗೆ ಪೆಟ್ಟು: ಪ್ರಜ್ವಲ್‌ಗೆ ಐಸಿಯುನಲ್ಲಿ ಚಿಕಿತ್ಸೆ ಹುಬ್ಬಳ್ಳಿ: ಇಲ್ಲಿನ ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಇಬ್ಬರು ಆಟಗಾರರು ಪರಸ್ಪರ ಡಿಕ್ಕಿ ಹೊಡೆದು ಆಟಗಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ‘ಎ’–ಧಾರವಾಡದ ಎಸ್‌ಡಿಎಂ ‘ಬಿ’ ತಂಡಗಳ ನಡುವೆ ಶನಿವಾರ ಪಂದ್ಯ ನಡೆದಿತ್ತು. 19ನೇ ಓವರ್‌ನಲ್ಲಿ ಫೀಲ್ಡಿಂಗ್‌ ಮಾಡುವಾಗ ಕವರ್ಸ್‌ ಹಾಗೂ ಪಾಯಿಂಟ್‌ ಕ್ಷೇತ್ರದ ನಡುವೆ ಎಸ್‌ಡಿಎಂ ತಂಡದ ಪ್ರಜ್ವಲ್ ಶಿರೋಳ ಮತ್ತು ಪ್ರಜ್ವಲ್ಬೋರಣ್ಣನವರ ಡಿಕ್ಕಿಯಾಗಿ,ಪ್ರಜ್ವಲ್‌ ಶಿರೋಳ ಪ್ರಜ್ಞಾ ಹೀನನಾಗಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಕ್ಲಬ್‌ನ ಸದಸ್ಯರು, ಪಂದ್ಯ ನೋಡುತ್ತಿದ್ದವರು ಮತ್ತು ಕೆಎಸ್‌ಸಿಎ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ಸಮಯದಲ್ಲಿಯೇ ಸ್ಕ್ಯಾನಿಂಗ್‌ ಮಾಡಿದಾಗ ಮಿದುಳಿಗೆ ಬಲವಾಗಿ ಪೆಟ್ಟು ಬಿದ್ದಿದ್ದು ದೃಢಪಟ್ಟಿತ್ತು. ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದರು. ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಎಸ್‌ಸಿಎ ಧಾರವಾಡ ವಲಯದ ಚೇರ್ಮನ್‌ ವೀರಣ್ಣ ಸವಡಿ, ‘ಪ್ರಜ್ವಲ್‌ ಶಿರೋಳ ಪ್ರಜ್ಞಾಹೀನನಾಗಿದ್ದರಿಂದ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಲೇಬೇಕು ಎಂದು ವೈದ್ಯರು ಹೇಳಿದ್ದರು. ಪೋಷಕರಿಗೆ ವಿಷಯ ತಿಳಿಸಿ ಒಂದೂವರೆ ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು. ಪ್ರಜ್ವಲ್‌ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ ಬಳಿಕವೇ ನಾವು ನೆಮ್ಮದಿಯ ನಿಟ್ಟುಸಿರು ಬಿಟ್ಟೆವು’ ಎಂದು ಘಟನೆಯನ್ನು ವಿವರಿಸಿದರು. ‘ಸಕಾಲಕ್ಕೆ ನಿರ್ಧಾರ ತೆಗೆದುಕೊಂಡು ಚಿಕಿತ್ಸೆ ಕೊಡಿಸಿದ್ದರಿಂದ ಮಗನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ’ ಎಂದು ‌ಪ್ರಜ್ವಲ್ ಶಿರೋಳ ತಂದೆ ಹನುಮಂತ ತಿಳಿಸಿದರು. ಪ್ರಜ್ವಲ್‌ ಶಿರೋಳ 19 ವರ್ಷದ ಒಳಗಿನವರ ವಿಭಾಗದ ರಾಜ್ಯ ಟೂರ್ನಿಯಲ್ಲಿ ಧಾರವಾಡ ವಲಯವನ್ನು ಪ್ರತಿನಿಧಿಸಿದ್ದರು. ಚಿಕಿತ್ಸೆ ಖರ್ಚು ಭರಿಸಲಿರುವ ಕೆಎಸ್‌ಸಿಎ ಗಾಯಗೊಂಡಿರುವ ಪ್ರಜ್ವಲ್‌ ಶಿರೋಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಭರಿಸಲಿದೆ. ‘ಶನಿವಾರ ಸಂಜೆ ಪ್ರಜ್ವಲ್‌ ಶಿರೋಳಗೆ ಪ್ರಜ್ಞೆಬಂದಿದೆ. ಮಂಗಳವಾರದ ತನಕ ಐಸಿಯುನಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಆತನ ಪೋಷಕರು ಚಿಂತಿಸಬೇಕಿಲ್ಲ. ನಮ್ಮ ಸಂಸ್ಥೆ ಆಟಗಾರನ ಪರ ಇರಲಿದೆ. ಸಂಪೂರ್ಣ ಖರ್ಚು ನೋಡಿಕೊಳ್ಳಲಿದೆ’ ಎಂದು ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.