ನಿಂದನೆ: ರಫೀಕ್ ಕ್ಷಮೆ ಯಾಚನೆ ಲಂಡನ್‌: ಜನಾಂಗೀಯ ನಿಂದನೆಯ ಸಂದೇಶ ಕಳುಹಿಸಿದ ಆರೋಪಕ್ಕೆ ಒಳಗಾಗಿರುವ ಯಾರ್ಕ್‌ಶೈರ್‌ ತಂಡದ ಮಾಜಿ ಆಟಗಾರ ಅಜೀಮ್ ರಫೀಕ್ ಶುಕ್ರವಾರ ಕ್ಷಮೆ ಕೋರಿದ್ದಾರೆ. 2011ರಲ್ಲಿ ತಾವು ಕಳುಹಿಸಿದ ಸಂದೇಶ ಕ್ಷಮೆಗೆ ಅರ್ಹವಾದುದಲ್ಲ. ಆ ಸಂದೇಶದ ಬಗ್ಗೆ ವಿಷಾದವಿದೆ ಎಂದು ಅವರು ಹೇಳಿದ್ದಾರೆ. 30 ವರ್ಷದ ರಫೀಕ್ ತಾವು 19 ವರ್ಷದವರಾಗಿದ್ದಾಗ ಸಂದೇಶ ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈಚೆಗೆ ನನ್ನ ಖಾತೆಯನ್ನು ಪರಿಶೀಲಿಸಿದಾಗ ಅದು ಗಮನಕ್ಕೆ ಬಂದಿದೆ. ಅದು ಕಂಡು ನಾಚಿಕೆಯಾಯಿತು. ಆದ್ದರಿಂದ ಅಳಿಸಿಹಾಕಿದ್ದೇನೆ‘ ಎಂದು ರಫೀಕ್ ಹೇಳಿಕೊಂಡಿದ್ದಾರೆ. ರಫೀಕ್‌ ಹಾಗೂ ವಾರ್ವಿಕ್ ಶೈರ್–ಲೆಸಿಸ್ಟರ್‌ಶೈರ್ ತಂಡಗಳ ಮಾಜಿ ಆಟಗಾರ ಅತೀಕ್ ಜಾವೆದ್ ಅವರು ಫೇಸ್‌ಬುಕ್‌ನಲ್ಲಿ ಯಹೂದಿ ವಂಶಸ್ಥ ವ್ಯಕ್ತಿಯೊಬ್ಬರ ಕುರಿತ ಹಂಚಿಕೊಂಡಿದ್ದ ಚಿತ್ರಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.