ಮನೀಷ್ ಬಳಗಕ್ಕೆ ಫೈನಲ್ ಕನಸು ನವದೆಹಲಿ: ಅನುಭವಿ ಬ್ಯಾಟರ್‌ಗಳು ಮತ್ತು ಯುವ ಬೌಲರ್‌ಗಳ ಕರ್ನಾಟಕ ತಂಡ ಶನಿವಾರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ವಿದರ್ಭಕ್ಕೆ ಸವಾಲೊಡ್ಡಲು ಸಿದ್ಧವಾಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಬಂಗಾಳ ತಂಡದ ಎದುರು ‘ಸೂಪರ್ ಓವರ್‌’ನಲ್ಲಿ ಗೆದ್ದು ನಾಲ್ಕರ ಘಟ್ಟಕ್ಕೆ ಪ್ರವೇಶಿಸಿರುವ ಕರ್ನಾಟಕ ಭರ್ತಿ ಆತ್ಮವಿಶ್ವಾಸದಲ್ಲಿದೆ. ಟೂರ್ನಿಯ ಇತಿಹಾಸದಲ್ಲಿ ಮೂರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡವು ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ, ಕಳೆದೆರಡು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭದ ಅವಕಾಶ ಪಡೆದಿದ್ದ ಬಿ.ಆರ್. ಶರತ್ ವಿಫಲರಾಗಿದ್ದರು. ಆದ್ದರಿಂದ ಈ ಪಂದ್ಯದಲ್ಲಿ ಅವರ ಕ್ರಮಾಂಕ ಬದಲಾಗುವ ಸಾಧ್ಯತೆ ಇದೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ನವಪ್ರತಿಭೆ ಅಭಿನವ್ ಮನೋಹರ್ ಮಿಂಚುತ್ತಿರುವುದು ತಂಡದ ಬಲ ಹೆಚ್ಚಿಸಿದೆ. ಅನುಭವಿ ಕರುಣ್ ನಾಯರ್, ಪಾಂಡೆ ಅವರೂ ಉತ್ತಮ ಲಯದಲ್ಲಿದ್ದಾರೆ. ಯುವ ಬೌಲರ್‌ಗಳಾದ ಎಂಬಿ. ದರ್ಶನ್, ವಿದ್ಯಾಧರ್ ಪಾಟೀಲ ಮತ್ತು ವಿಜಯಕುಮಾರ್ ವೈಶಾಖ ಇನ್ನಷ್ಟು ನಿಖರವಾದ ದಾಳಿ ನಡೆಸಿದರೆ ಎದುರಾಳಿ ಬಳಗವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಬಹುದು. ಈ ಪಂದ್ಯದಲ್ಲಿ ಅನುಭವಿ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇದರಿಂದಾಗಿ ಪ್ರವಿಣ್ ದುಬೆ ಸ್ಥಾನ ತೆರವು ಮಾಡಬೇಕಾಗಬಹುದು. ವಿದರ್ಭ ತಂಡವು ಎಂಟರ ಘಟ್ಟದಲ್ಲಿ ರಾಜಸ್ಥಾನ ಎದುರು ಜಯಿಸಿತ್ತು. ವಿದರ್ಭ ಬೌಲಿಂಗ್ ಪಡೆಯು ಎದುರಾಳಿ ಬಳಗವನ್ನು 84 ರನ್‌ಗಳಿಗೆ ಕಟ್ಟಿಹಾಕಿತ್ತು. ಪ್ಲೇಟ್ ಗುಂಪಿನಿಂದ ಪ್ರೀಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದ ವಿದರ್ಭಕ್ಕೆ ಗುಂಪು ಹಂತದಲ್ಲಿ ಕಠಿಣ ಸವಾಲು ಇರಲಿಲ್ಲ. ಮಹಾರಾಷ್ಟ್ರ ತಂಡವನ್ನು ಸೋಲಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿತ್ತು.ವಿದರ್ಭ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಕನ್ನಡಿಗ ಗಣೇಶ್ ಸತೀಶ್ ಪ್ರಮುಖ ಶಕ್ತಿಯಾಗಿದ್ದಾರೆ. ಅಥರ್ವ ತೈಡೆ, ಅಕ್ಷಯ್ ವಾಡಕರ್ ಉತ್ತಮ ಲಯದಲ್ಲಿದ್ದಾರೆ. ತಂಡಗಳು: ಕರ್ನಾಟಕ: ಮನೀಷ್ ಪಾಂಡೆ (ನಾಯಕ), ರೋಹನ್ ಕದಂ, ಬಿ.ಆರ್. ಶರತ್, ಕರುಣ್ ನಾಯರ್, ಅಭಿನವ್ ಮನೋಹರ್, ಆರ್. ಸಮರ್ಥ್, ವಿದ್ಯಾಧರ್ ಪಾಟೀಲ, ಎಂ.ಬಿ. ದರ್ಶನ್, ಜೆ. ಸುಚಿತ್, ವಿಜಯಕುಮಾರ್ ವೈಶಾಖ್, ವಿ. ಕೌಶಿಕ್, ಆದಿತ್ಯ ಸೋಮಣ್ಣ, ಕೆ.ಸಿ. ಕಾರ್ಯಪ್ಪ, ‍ಪ್ರವೀಣ್ ದುಬೆ, ಅನಿರುದ್ಧ ಜೋಶಿ, ನಿಹಾಲ್ ಉಳ್ಳಾಲ, ಕೆ.ವಿ.ಸಿದ್ಧಾರ್ಥ್. ವಿದರ್ಭ: ಅಕ್ಷಯ್ ವಾಡಕರ್ (ನಾಯಕ), ಸಿದ್ಧೇಶ್ ವಾಥ್, ಶುಭಂ ದುಬೆ, ಹರ್ಷ ದುಬೆ, ಗಣೇಶ್ ಸತೀಶ್, ಅಕ್ಷಯ್ ಕರ್ಣೆವರ್, ದರ್ಶನ್ ನಾಲ್ಕಂಡೆ, ಸಿದ್ಧೇಶ್ ನೆರಲ್, ಯಶ್ ರಾಥೋಡ್, ಸಂಜಯ್ ರಘುನಾಥ್, ಜಿತೇಶ್ ಶರ್ಮಾ (ವಿಕೆಟ್‌ಕೀಪರ್), ಆತ್ರೇಯ ತೈಡೆ, ಆದಿತ್ಯ ಠಾಕ್ರೆ, ಅಕ್ಷಯ್ ವಖಾರೆ, ಅಪೂರ್ವ್ ವಾಂಖೆಡೆ, ಉಮೇಶ್ ಯಾದವ್, ಯಶ್ ಠಾಕೂರ್, ಪಿ. ರೇಖಡೆ, ಗಣೇಶ್ ಭೋಸ್ಲೆ, ಸೂರಜ್ ರೈ, ಲಲಿತ್ ಎಂ ಯಾದವ್. ಪಂದ್ಯ ಆರಂಭ: ಮಧ್ಯಾಹ್ನ 1.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.