ಬಂಗಾಳದ ಸವಾಲು ಮೀರುವ ಛಲದಲ್ಲಿ ಕರ್ನಾಟಕ ನವದೆಹಲಿ: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ಬಳಗದ ಮುಂದೆ ಈಗ ಮತ್ತೆ ಬಂಗಾಳ ತಂಡದ ಸವಾಲಿದೆ. ಗುರುವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಬಂಗಾಳ ವಿರುದ್ಧ ಸೋತಿದ್ದ ಕರ್ನಾಟಕ ತಂಡವು ಪ್ರೀಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು. ಸುದೀಪ್ ಚಟರ್ಜಿ ನಾಯಕತ್ವದ ಬಂಗಾಳವು ನೇರವಾಗಿ ಎಂಟರ ಘಟ್ಟ ಪ್ರವೇಶಿಸಿತ್ತು. ಮಂಗಳವಾರ ಸೌರಾಷ್ಟ್ರದ ಎದುರಿನ ಪ್ರೀಕ್ವಾರ್ಟರ್‌ನಲ್ಲಿ ಕರ್ನಾಟಕದ ಬ್ಯಾಟಿಂಗ್ ವೈಫಲ್ಯ ಸೋಲಿನ ಆತಂಕ ಮೂಡಿಸಿತ್ತು. ಆದರೆ, ಪದಾರ್ಪಣೆ ಪಂದ್ಯದಲ್ಲಿಯೇ ಮಿಂಚಿದ ಅಭಿನವ್ ಮನೋಹರ್ ಅಬ್ಬರದ ಬ್ಯಾಟಿಂಗ್‌ನಿಂದಾಗಿ ತಂಡವು ಗೆದ್ದಿತು. ಅನುಭವಿ ಆಟಗಾರರಾದ ಮನೀಷ್, ಕರುಣ್ ವೈಫಲ್ಯ ಅನುಭವಿಸಿದ್ದರು. ಎಂಟರ ಘಟ್ಟದ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. ವಿ.ಕೌಶಿಕ್, ವಿದ್ಯಾಧರ ಪಾಟೀಲ, ಸ್ಪಿನ್ನರ್‌ಗಳಾದ ಸುಚಿತ್ ಮತ್ತು ಕಾರ್ಯಪ್ಪ ಅವರ ಮುಂದೆ ಬಂಗಾಳದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ. ಆದರೆ, ಬಂಗಾಳ ತಂಡದಲ್ಲಿ ಅಭಿಮನ್ಯು ಈಶ್ವರನ್ ಅವರಿಲ್ಲ. ಅದರಿಂದಾಗಿ ಉಳಿದ ಬ್ಯಾಟರ್‌ಗಳ ಹೊಣೆ ಹೆಚ್ಚಿದೆ. ಇದು ಕರ್ನಾಟಕ ತಂಡಕ್ಕೆ ಅನುಕೂಲಕರ ಅಂಶವಾಗಬಹುದು. ಆದರೆ, ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಲಯಕ್ಕೆ ಮರಳಿದರೆ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯ. ತಂಡಗಳು: ಕರ್ನಾಟಕ: ಮನೀಷ್ ಪಾಂಡೆ (ನಾಯಕ), ರೋಹನ್ ಕದಂ, ಬಿ.ಆರ್. ಶರತ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಅಭಿನವ್ ಮನೋಹರ್, ಆರ್. ಸಮರ್ಥ್, ಅನಿರುದ್ಧ ಜೋಶಿ, ಜೆ. ಸುಚಿತ್, ವಿಜಯಕುಮಾರ್ ವೈಶಾಖ, ಕೆ.ಸಿ. ಕಾರ್ಯಪ್ಪ, ವಿದ್ಯಾಧರ ಪಾಟೀಲ, ವಿ. ಕೌಶಿಕ್. ಬಂಗಾಳ: ಸುದೀಪ್ ಚಟರ್ಜಿ (ನಾಯಕ), ಋತಿಕ್ ಚಟರ್ಜಿ, ವೃದ್ಧಿಮಾನ್ ಸಹಾ(ವಿಕೆಟ್‌ಕೀಪರ್), ಕೈಫ್ ಅಹಮದ್, ಶಹಬಾಜ್ ಅಹಮದ್, ಸುಜೀತ್‌ಕುಮಾರ್ ಯಾದವ್, ಪ್ರದಿಪ್ತ್ ಪ್ರಾಮಾಣಿಕ್, ಅಭಿಷೇಕ್ ದಾಸ್, ಮುಖೇಶಕುಮಾರ್, ಆಕಾಶದೀಪ್. ಪಂದ್ಯಗಳು ರಾಜಸ್ಥಾನ–ವಿದರ್ಭ (ಏರ್‌ಫೋರ್ಸ್ ಮೈದಾನ, ಪಾಲಂ) ಪಂದ್ಯ ಆರಂಭ: ಬೆಳಿಗ್ಗೆ 8.30 ತಮಿಳುನಾಡು–ಕೇರಳ (ಅರುಣ್ ಜೇಟ್ಲಿ ಕ್ರೀಡಾಂಗಣ) ಪಂದ್ಯ ಆರಂಭ: ಬೆಳಿಗ್ಗೆ 8.30 ಕರ್ನಾಟಕ–ಬಂಗಾಳ (ಅರುಣ್ ಜೇಟ್ಲಿ ಕ್ರೀಡಾಂಗಣ) ಪಂದ್ಯ ಆರಂಭ: ಮಧ್ಯಾಹ್ನ 1ರಿಂದ ಗುಜರಾತ್–ಹೈದರಾಬಾದ್ (ಏರ್‌ಫೋರ್ಸ್ ಕ್ರೀಡಾಂಗಣ. ಪಾಲಂ) ಮಧ್ಯಾಹ್ನ 1ರಿಂದ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.