ಕ್ರಿಕೆಟ್‌ | ಐಸಿಸಿ ರ‍್ಯಾಂಕಿಂಗ್: 3ನೇ ಸ್ಥಾನದಲ್ಲಿ ಭಾರತ ದುಬೈ (ಪಿಟಿಐ): ಇಂಗ್ಲೆಂಡ್‌ ಎದುರಿನ ಮೂರು ಪಂದ್ಯಗಳ ಸರಣಿಯನ್ನು 2–1 ರಲ್ಲಿ ಗೆದ್ದ ಭಾರತ ತಂಡ, ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಭಾನುವಾರ ನಡೆದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಐದು ವಿಕೆಟ್‌ ಜಯ ಸಾಧಿಸಿತ್ತು. ಅಜೇಯ ಶತಕ ಗಳಿಸಿದ ರಿಷಭ್‌ ಪಂತ್‌ (125) ಮತ್ತು ಆಲ್‌ರೌಂಡ್‌ ಆಟವಾಡಿದ ಹಾರ್ದಿಕ್‌ ಪಾಂಡ್ಯ (71) ಭಾರತದ ಗೆಲುವಿಗೆ ಕಾರಣರಾಗಿದ್ದರು. ಒಟ್ಟು 109 ಪಾಯಿಂಟ್‌ಗಳನ್ನು ಹೊಂದಿರುವ ಭಾರತ, ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕಿಂತ (106) ಮೂರು ರೇಟಿಂಗ್‌ ಪಾಯಿಂಟ್‌ಗಳಿಂದ ಮುನ್ನಡೆಯಲ್ಲಿದೆ. 128 ಪಾಯಿಂಟ್‌ ಹೊಂದಿರುವ ನ್ಯೂಜಿಲೆಂಡ್‌ ಅಗ್ರಸ್ಥಾನದಲ್ಲಿದ್ದು, ಇಂಗ್ಲೆಂಡ್‌ (121) ಎರಡನೇ ಸ್ಥಾನದಲ್ಲಿದೆ. ವೆಸ್ಟ್‌ ಇಂಡೀಸ್‌ ಎದುರಿನ ಮುಂಬರುವ ಸರಣಿಯಲ್ಲಿ ಉತ್ತಮ ಸಾಧನೆ ತೋರಿದರೆ, ಭಾರತ ತಂಡಕ್ಕೆ ರೇಟಿಂಗ್‌ ಪಾಯಿಂಟ್‌ಗಳನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.