ಕಳಪೆ ಬ್ಯಾಟಿಂಗ್‌ಗೆ ದಂಡ ತೆತ್ತ ಕರ್ನಾಟಕ: ತಮಿಳುನಾಡು ವಿರುದ್ಧ ಸೋಲು ತಿರುವನಂತಪುರ: ತಮಿಳುನಾಡಿನ ಬೌಲಿಂಗ್ ಮುಂದೆ ಕುಸಿದ ಕರ್ನಾಟಕ ತಂಡವು ಗುರುವಾರ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತಿತು. ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎನ್. ಜಗದೀಶನ್ ನಾಯಕತ್ವದ ತಮಿಳುನಾಡು 8 ವಿಕೆಟ್‌ಗಳಿಂದ ಜಯಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ಕಿಶೋರ್ (28ಕ್ಕೆ3) ಮತ್ತು ಮಣಿಮಾರನ್ ಸಿದ್ಧಾರ್ಥ್ (23ಕ್ಕೆ4) ಅವರ ಬೌಲಿಂಗ್ ಎದುರು ಕುಸಿಯಿತು. 36.3 ಓವರ್‌ಗಳಲ್ಲಿ 122 ರನ್ ಗಳಿಸಿತು. ಅದಕ್ಕುತ್ತರವಾಗಿ ತಮಿಳುನಾಡು ತಂಡವು 28 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 123 ರನ್ ಗಳಿಸಿತು. ಬಾಬಾ ಇಂದ್ರಜಿತ್ (ಅಜೇಯ 51; 74ಎ, 6ಬೌಂಡರಿ) ಅರ್ಧಶತಕ ಹೊಡೆದರು. ಮಧ್ಯಮವೇಗಿ ಸಂದೀಪ್ ವರಿಯರ್ ಮೊದಲ ಓವರ್‌ನಲ್ಲಿ ಕರ್ನಾಟಕಕ್ಕೆ ದೊಡ್ಡ ಹೊಡೆತ ಕೊಟ್ಟರು. ಪುದುಚೇರಿ ಎದುರಿನ ಪಂದ್ಯದಲ್ಲಿ ಅಮೋಘವಾಗಿ ಆಡಿದ್ದ ಸಮರ್ಥ್ ಇಲ್ಲಿ ಖಾತೆಯನ್ನೇ ತೆರೆಯಲಿಲ್ಲ. ಕೆ.ವಿ. ಸಿದ್ಧಾರ್ಥ್ (6 ರನ್) ಕೂಡ ದೊಡ್ಡ ಇನಿಂಗ್ಸ್ ಆಡಲಿಲ್ಲ. ಆದರೆ, ರೋಹನ್ ಕದಂ (37; 69ಎ) ಮತ್ತು ನಾಯಕ ಮನೀಷ್ ಪಾಂಡೆ (40; 54ಎ) ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದರು. ಇಬ್ಬರೂ ತಾಳ್ಮೆಯಿಂದ ಆಡಿದ್ದರಿಂದ ರನ್‌ ಗಳಿಕೆ ವೇಗ ಹೆಚ್ಚಿರಲಿಲ್ಲ. ಈ ಒತ್ತಡದ ಸನ್ನಿವೇಶವನ್ನು ಸಮರ್ಥವಾಗಿ ಬಳಸಿಕೊಂಡ ವಾಷಿಂಗ್ಟನ್ ಸುಂದರ್ ಅವರು ಕದಂ ವಿಕೆಟ್ ಗಳಿಸಿ, ಜೊತೆಯಾಟವನ್ನು ಮುರಿದರು.ನಂತರದ ಆಟದಲ್ಲಿ ಸಿದ್ಧಾರ್ಥ್ ತಮ್ಮ ಸ್ಪಿನ್ ಮೋಡಿ ಮೆರೆದರು. ಸಿದ್ಧಾರ್ಥ್ಎಸೆತದ ತಿರುವು ಗುರುತಿಸುವಲ್ಲಿ ವಿಫಲರಾದ ಮನೀಷ್ ಕ್ಲೀನ್‌ ಬೌಲ್ಡ್ ಆದರು. ಕರುಣ್ ನಾಯರ್‌ಗೂ ಸಿದ್ಧಾರ್ಥ್ ಅವರೇ ಪೆವಿಲಿಯನ್ ದಾರಿ ತೋರಿಸಿದರು. ಶ್ರೀನಿವಾಸ್ ಶರತ್ ಕೂಡ ವಿಫಲರಾದರು. ಕೆಳಕ್ರಮಾಂಕದ ವಿಕೆಟ್‌ಗಳನ್ನು ಸಿದ್ಧಾರ್ಧ್ ಮತ್ತು ಸಾಯಿಕಿಶೋರ್ ಹಂಚಿಕೊಂಡು ಕರ್ನಾಟಕದ ಇನಿಂಗ್ಸ್‌ಗೆ ಬೇಗನೆ ತೆರೆಯೆಳೆದರು. ಸುಲಭ ಗುರಿಯನ್ನು ಬೆನ್ನಟ್ಟಿದ ತಮಿಳುನಾಡಿಗೆ ಮಧ್ಯಮವೇಗಿ ವಿದ್ಯಾಧರ್ ಪಾಟೀಲ ಏಳನೇ ಓವರ್‌ನಲ್ಲಿ ಹೊಡೆತ ನೀಡಿದರು. ಜಗದೀಶನ್ ವಿಕೆಟ್ ಗಳಿಸಿದರು. 16ನೇ ಓವರ್‌ನಲ್ಲಿ ಸಾಯಿ ಸುದರ್ಶನ್ ವಿಕೆಟ್ ಪಡೆದ ಸುಚಿತ್ ಸಂಭ್ರಮಿಸಿದರು. ನಂತರದ ಆಟದಲ್ಲಿ ಕರ್ನಾಟಕ ತಂಡವು ಸಡಗರಪಡಲು ಬಾಬಾ ಮತ್ತು ವಾಷಿಂಗ್ಟನ್ ಅವಕಾಶವನ್ನೇ ಕೊಡಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.