ಭಾರತ ‘ಎ‘ ತಂಡಕ್ಕೆ ಪ್ರಶಸ್ತಿ ವಿಜಯವಾಡ (ಪಿಟಿಐ): ಬ್ಯಾಟರ್‌ ಗಳಾದ ಯಷ್ಟಿಕಾ ಭಾಟಿಯಾ ಮತ್ತು ಚಲ್ಲಾ ಝಾನ್ಸಿ ಲಕ್ಷ್ಮಿ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಭಾರತ ‘ಎ’ ತಂಡ ಫೈನಲ್‌ನಲ್ಲಿ ಮೂರು ವಿಕೆಟ್‌ಗಳಿಂದ ಭಾರತ ‘ಡಿ’ ತಂಡವನ್ನು ಸೋಲಿಸಿ ಮಹಿಳಾ ಚಾಲೆಂಜರ್‌ ಟ್ರೋಫಿ ಗೆದ್ದುಕೊಂಡಿತು. ಗುರುವಾರ ನಡೆದ ಪಂದ್ಯದಲ್ಲಿ ಪೂಜಾ ವಸ್ತ್ರಕಾರ್‌ ನೇತೃತ್ವದ ತಂಡ ಮೊದಲು ಆಡಿ 50 ಓವರುಗಳಲ್ಲಿ 8 ವಿಕೆಟ್‌ಗೆ 219 ರನ್‌ ಪೇರಿಸಿತು. ಆರಂಭ ಆಟಗಾರ್ತಿ ಎಸ್‌.ಮೇಘನಾ (44 ಎಸೆತಗಳಲ್ಲಿ 45) ಮತ್ತು ಕೆಳ ಮಧ್ಯಮ ಕ್ರಮಾಂಕದ ಆಟಗಾರ್ತಿ ಅಮನ್‌ಜೋತ್‌ ಕೌರ್‌ (74 ಎಸೆತಗಳಲ್ಲಿ 55) ಅವರು ಗಮನಾರ್ಹ ಕಾಣಿಕೆ ನೀಡಿದರು. ನಾಲ್ಕು ತಂಡಗಳ ಟೂರ್ನಿಯ ಏಕೈಕ ಅಜೇಯ ತಂಡವೆಂಬ ಹೆಗ್ಗಳಿಕೆಯೊಡನೆ ಭಾರತ ‘ಡಿ’ ತಂಡ ಇಲ್ಲಿ ಆಡಲು ಇಳಿದಿತ್ತು. ಆದರೆ ಈ ಮೊತ್ತವನ್ನು ಸ್ನೇಹಾ ರಾಣಾ ಬಳಗ 45.4 ಓವರುಗಳಲ್ಲಿ ದಾಟಿತು. ಯಷ್ಟಿಕಾ ಭಾಟಿಯಾ 102 ಎಸೆತಗಳನ್ನೆದುರಿಸಿ 86 ರನ್‌ ಬಾರಿಸಿದರೆ, ಲಕ್ಷ್ಮೀ 70 ಎಸೆತಗಳಲ್ಲಿ 64 ರನ್‌ ಸೇರಿಸಿ ತಂಡವನ್ನು ಸುಲಭವಾಗಿ ಗುರಿಮುಟ್ಟಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.