ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಬಂಗಾಳಕ್ಕೆ ಮಣಿದ ಕರ್ನಾಟಕ ಬೆಂಗಳೂರು: ಸವಾಲಿನ ಮೊತ್ತ ಕಲೆ ಹಾಕಿದರೂ ಎದುರಾಳಿ ತಂಡದ ಬ್ಯಾಟರ್‌ಗಳನ್ನು ನಿಯಂತ್ರಿಸುವಲ್ಲಿ ಬೌಲರ್‌ಗಳು ವಿಫಲರಾದರು. ಹೀಗಾಗಿ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿತು. ತಿರುವನಂತಪುರದ ಮಂಗಳಾಪುರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಬಂಗಾಳ ನಾಲ್ಕು ವಿಕೆಟ್‌ಗಳಿಂದ ಜಯ ಗಳಿಸಿತು. ಸೋಲಿನೊಂದಿಗೆ ಕರ್ನಾಟಕ ‍ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿಯಿತು. ಹೀಗಾಗಿ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಆಡಬೇಕಾದ ಸ್ಥಿತಿ ಒದಗಿದೆ. ತಲಾ ನಾಲ್ಕು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಜೊತೆ ಮೋಹಕ ಅರ್ಧಶತಕ ಸಿಡಿಸಿದ ನಾಯಕ ಮನೀಷ್ ಪಾಂಡೆ ಅವರ ಬ್ಯಾಟಿಂಗ್ ಬಲದಿಂದ ಕರ್ನಾಟಕ 8 ವಿಕೆಟ್‌ಗಳಿಗೆ 252 ರನ್ ಗಳಿಸಿತ್ತು. ಬಂಗಾಳ48.3 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 253 ರನ್ ಗಳಿಸಿತು. ಆದರೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿಯಿತು. ಎರಡು ಮತ್ತು ಮೂರನೇ ಕ್ರಮಾಂಕದ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಟಲಾಗದೆ ಮರಳಿದರೂ ಆರಂಭಿಕ ಬ್ಯಾಟರ್ ಅಭಿಷೇಕ್ ದಾಸ್, ನಾಯಕ ಮತ್ತು ನಾಲ್ಕನೇ ಕ್ರಮಾಂಕದ ಸುದೀಪ್ ಚಟರ್ಜಿ ಹಾಗೂ ಐದನೇ ಕ್ರಮಾಂಕದ ಋತಿಕ್ ಚೌಧರಿ ಛಲದಿಂದ ಆಡಿ ತಂಡಕ್ಕೆ ಜಯ ತಂದುಕೊಟ್ಟರು. ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 35 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ರೋಹನ್ ಕದಂ ಮತ್ತು ಮನೀಷ್ ಪಾಂಡೆ ಇನಿಂಗ್ಸ್‌ಗೆ ಚೇತರಿಕೆ ತುಂಬಿದರು. ಕದಂ ಔಟಾದ ನಂತರ ಮನೀಷ್‌–ಕರುಣ್ ನಾಯರ್ ಜೋಡಿ 69 ರನ್‌ ಸೇರಿಸಿದರು. ಕೊನೆಯಲ್ಲಿ ಪ್ರವೀಣ್ ದುಬೆ ಮಿಂಚಿನ ಬ್ಯಾಟಿಂಗ್ ಮಾಡಿ ಅಜೇಯರಾಗಿ ಉಳಿದರು. ಕರ್ನಾಟಕಕ್ಕೆ ರಾಜಸ್ಥಾನ ಎದುರಾಳಿ 19ರಂದು ಜೈಪುರದಲ್ಲಿ ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ರಾಜಸ್ಥಾನವನ್ನು ಎದುರಿಸಲಿದೆ. ವಿದರ್ಭ ತಂಡ ತ್ರಿಪುರವನ್ನು, ಉತ್ತರ ಪ್ರದೇಶ ತಂಡ ಮಧ್ಯಪ್ರದೇಶವನ್ನು ಎದುರಿಸಲಿದೆ. ‘ಬಿ’ ಗುಂಪಿನಿಂದ ತಮಿಳುನಾಡು ನೇರ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಇತರ ಗುಂಪುಗಳಿಂದ ಹಿಮಾಚಲ ಪ್ರದೇಶ, ಸೌರಾಷ್ಟ್ರ, ಕೇರಳ ಮತ್ತು ಸರ್ವಿಸಸ್‌ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.