ಆಸ್ಟ್ರೇಲಿಯಾಗೆ ‘ಪಿಂಕ್‌ ಬಾಲ್‌’ ಪಾರಮ್ಯದ ಬಲ ಅಡಿಲೇಡ್‌: ಅಮೋಘ ಜಯದೊಂದಿಗೆ ಶುಭಾರಂಭ ಮಾಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಹೆಚ್ಚಿಸುವ ಛಲದೊಂದಿಗೆ ಗುರುವಾರ ಕಣಕ್ಕೆ ಇಳಿಯಲಿದೆ. ಇಲ್ಲಿ ನಡೆಯಲಿರುವ ಹಗಲು ರಾತ್ರಿ ಪಂದ್ಯದಲ್ಲಿ ಇಂಗ್ಲೆಂಡ್ ತಿರುಗೇಟು ನೀಡುವ ಹುಮ್ಮಸ್ಸಿನಲ್ಲಿದೆ. ಈ ವರೆಗೆ ನಡೆದಿರುವ ಎಂಟು ‘ಪಿಂಕ್ ಬಾಲ್ ಟೆಸ್ಟ್‌’ಗಳಲ್ಲಿ ಎಂಟನ್ನೂ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಈ ಮೂಲಕ ಹಗಲು ರಾತ್ರಿ ಪಂದ್ಯಗಳಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿದೆ. ಹೀಗಾಗಿ ಅಜೇಯ ಓಟ ಮುಂದುವರಿಸುವ ಸವಾಲು ಕೂಡ ತಂಡದ ಮುಂದೆ ಇದೆ. ಐಪಿಎಲ್‌ ಟೂರ್ನಿ ಒಳಗೊಂಡಂತೆ ಈಚೆಗೆ ಫಾರ್ಮ್ ಕಳೆದುಕೊಂಡಿದ್ದ ಡೇವಿಡ್ ವಾರ್ನರ್ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 94 ರನ್ ಗಳಿಸಿದ್ದರು. ಟ್ರಾವಿಸ್‌ ಹೆಡ್‌ ಭರ್ಜರಿ ಶತಕದೊಂದಿಗೆ ಮಿಂಚಿದ್ದರೆ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಸ್ಪಿನ್ನರ್ ನೇಥನ್ ಲಯನ್ ಬೌಲಿಂಗ್‌ನಲ್ಲಿ ಸಾಮರ್ಥ್ಯ ಮೆರೆದಿದ್ದರು. ಇದೆಲ್ಲದರ ಪರಿಣಾಮವಾಗಿ ತಂಡ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತ್ತು. ಹಗಲು ರಾತ್ರಿ ಪಂದ್ಯಗಳಲ್ಲಿ ಇಂಗ್ಲೆಂಡ್ ಹೆಚ್ಚು ಸಾಧನೆ ಮಾಡಿಲ್ಲ. ಈ ವರೆಗೆ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಅದು ಗೆದ್ದಿದೆ. 2017ರಲ್ಲಿ ತನ್ನ ಮೊದಲ ಯತ್ನದಲ್ಲಿ, ವೆಸ್ಟ್ ಇಂಡೀಸ್ ಎದುರು ಈ ಜಯ ಒದಗಿತ್ತು. ಮಾರ್ಚ್ ನಂತರ ಮೊದಲ ಬಾರಿ ಕಣಕ್ಕೆ ಇಳಿದ ಬೆನ್‌ ಸ್ಟೋಕ್ಸ್‌ ಮೊದಲ ಪಂದ್ಯದಲ್ಲಿ ನೀರಸ ಆಟವಾಡಿದ್ದರು. ಅವರ ಮೊಣಕಾಲಿಗೆ ಗಾಯವೂ ಆಗಿತ್ತು. ಮಂಗಳವಾರ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿರುವ ಅವರು ಪಂದ್ಯಕ್ಕೆ ಲಭ್ಯವಾಗುವ ಸೂಚನೆ ನೀಡಿದ್ದಾರೆ. ಆದ್ದರಿಂದ ತಂಡದಲ್ಲಿ ನಿರೀಕ್ಷೆ ಮೂಡಿದೆ. ಇಂಗ್ಲೆಂಡ್ ತಂಡದಲ್ಲಿ ಆ್ಯಂಡರ್ಸನ್ ಮೊದಲ ಟೆಸ್ಟ್‌ನಲ್ಲಿ ಅವಕಾಶ ಪಡೆಯದೇ ಇದ್ದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರಿಗೆ ಎರಡನೇ ಟೆಸ್ಟ್‌ಗೆ ಪ್ರಕಟಿಸಿರುವ ಇಂಗ್ಲೆಂಡ್‌ ತಂಡದಲ್ಲಿ ಸೇರಿಸಲಾಗಿದೆ. ಟೆಸ್ಟ್‌ನಲ್ಲಿ 632 ವಿಕೆಟ್ ಪಡೆದಿರುವ ಆ್ಯಂಡರ್ಸನ್ ಸರಣಿಯಲ್ಲಿ ಉಳಿದಿರುವ ಎಲ್ಲ ಪಂದ್ಯಗಳಲ್ಲೂ ಆಡಲು ಅವಕಾಶ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೇಗಿ ಸ್ಟುವರ್ಟ್ ಬ್ರಾಡ್ ಅವರಿಗೂ 12ರ ಬಳಗದಲ್ಲಿ ಸ್ಥಾನ ನೀಡಲಾಗಿದ್ದು ಇವರಿಬ್ಬರನ್ನೂ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ತಂಡದಲ್ಲಿ ಜೋಶ ಹ್ಯಾಜಲ್‌ವುಡ್ ಅವರ ಬದಲಿಗೆ ಜೇ ರಿಚರ್ಡ್ಸನ್ ಅವರನ್ನು ಕರೆಸಿಕೊಳ್ಳಲಾಗಿದೆ. ಗಾಯಗೊಂಡಿದ್ದ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಫಿಟ್‌ ಆಗಿದ್ದು ಪಂದ್ಯಕ್ಕೆ ಲಭ್ಯ ಇರುವರು ಎಂದು ನಾಯಕ ಪ್ಯಾಟ್ ಕಮಿನ್ಸ್ ತಿಳಿಸಿದ್ದಾರೆ. ರ‍್ಯಾಂಕಿಂಗ್ ಆಸ್ಟ್ರೇಲಿಯಾ 3 ಇಂಗ್ಲೆಂಡ್ 4 ಟೆಸ್ಟ್‌ನಲ್ಲಿ ಉಭಯ ತಂಡಗಳ ಬಲಾಬಲ ತಂಡ;ಪಂದ್ಯ;ಜಯ;ಸೋಲು;ಟೈ;ಡ್ರಾ ಆಸ್ಟ್ರೇಲಿಯಾ;835;395;226;2;212 ಇಂಗ್ಲೆಂಡ್;1041;378;312;–;351 ಮುಖಾಮುಖಿ ಫಲಿತಾಂಶ ಪಂದ್ಯಗಳು 352 ಆಸ್ಟ್ರೇಲಿಯಾ ಜಯ 147 ಇಂಗ್ಲೆಂಡ್ ಗೆಲುವು 110 ಡ್ರಾ 95 ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಜಯದ ಓಟ ವರ್ಷ;ಸ್ಥಳ;ಎದುರಾಳಿ;ಅಂತರ 2015;ಅಡಿಲೇಡ್‌;ನ್ಯೂಜಿಲೆಂಡ್‌;3 ವಿಕೆಟ್‌ 2016;ಅಡಿಲೇಡ್‌;ದಕ್ಷಿಣ ಆಫ್ರಿಕಾ;7 ವಿಕೆಟ್‌ 2016;ಬ್ರಿಸ್ಬೇನ್;ಪಾಕಿಸ್ತಾನ;39 ರನ್‌ 2017;ಅಡಿಲೇಡ್‌;ಇಂಗ್ಲೆಂಡ್;120 ರನ್‌ 2019;ಬ್ರಿಸ್ಬೇನ್;ಶ್ರೀಲಂಕಾ;ಇನಿಂಗ್ಸ್‌,40 ರನ್‌ 2019;ಅಡಿಲೇಡ್‌;ಪಾಕಿಸ್ತಾನ;ಇನಿಂಗ್ಸ್‌, 48ರನ್‌ 2019;ಪರ್ತ್‌;ನ್ಯೂಜಿಲೆಂಡ್‌;296 ರನ್‌ 2020;ಅಡಿಲೇಡ್‌;ಭಾರತ;8 ವಿಕೆಟ್‌ ಆರಂಭ: ಬೆಳಿಗ್ಗೆ 9.30 (ಭಾರತೀಯ ಕಾಲಮಾನ) ನೇರ ಪ್ರಸಾರ: ಸೋನಿ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.