ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ: ಕರ್ನಾಟಕ ಜಯಭೇರಿ ಬೆಂಗಳೂರು: ಮಳೆ ಕಾಡಿದ ಪಂದ್ಯದಲ್ಲಿ ದಿಟ್ಟ ಆಟವಾಡಿದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು. ತಿರುವನಂತಪುರದ ಮಂಗಳಾಪುರ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಬರೋಡವನ್ನು ಆರು ವಿಕೆಟ್‌ಗಳಿಂದ ಮಣಿಸಿತು. ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 48.3 ಓವರ್‌ಗಳಲ್ಲಿ ಎದುರಾಳಿಗಳನ್ನು 176 ರನ್‌ಗಳಿಗೆ ನಿಯಂತ್ರಿಸುವಲ್ಲಿ ಬೌಲರ್‌ಗಳು ಯಶಸ್ವಿಯಾದರು. ಬರೋಡ ಇನಿಂಗ್ಸ್ ಮುಗಿದ ಕೂಡಲೇ ಮಳೆ ಸುರಿದ ಕಾರಣ ಪಂದ್ಯಕ್ಕೆ ಅಡ್ಡಿಯಾಯಿತು. ಮತ್ತೆ ಆರಂಭಗೊಂಡಾಗ 42 ಓವರ್‌ಗಳಲ್ಲಿ 147 ರನ್‌ಗಳ ಗುರಿಯನ್ನು ನೀಡಲಾಯಿತು. ಆರಂಭಿಕ ಜೋಡಿ ಆರ್. ಸಮರ್ಥ್ ಮತ್ತು ರೋಹನ್ ಕದಂ 44 ರನ್ ಸೇರಿಸಿದರು. ಅಷ್ಟರಲ್ಲಿ ರೋಹನ್ ವಿಕೆಟ್ ಕಳೆದುಕೊಂಡರು. ನಂತರ ಸಿದ್ಧಾರ್ಥ್ ಆಟ ರಂಗೇರಿತು. 25 ರನ್‌ಗಳ ಜೊತೆಯಾಟವಾಡಿ ಸಮರ್ಥ್ ಔಟಾದರು. ನಾಯಕ ಮನೀಷ್ ಪಾಂಡೆ ಕೇವಲ 19 ರನ್ ಗಳಿಸಿ ಔಟಾದರೆ ಕರುಣ್ ನಾಯರ್ ರನ್ ಔಟಾಗಿ ವಾಪಸಾದರು. ಆದರೆ ಸಿದ್ಧಾರ್ಥ್ ಕ್ರೀಸ್‌ನಲ್ಲಿ ತಳವೂರಿ ಇನಿಂಗ್ಸ್ ಮುನ್ನಡೆಸಿದರು. ಮುರಿಯದ ಐದನೇ ವಿಕೆಟ್‌ಗೆ ವಿಕೆಟ್ ಕೀಪರ್ ಶರತ್ ಜೊತೆ 47 ರನ್‌ಗಳ ಜೊತೆಯಾಟವಾಡಿ ಅವರು ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ತಂಡ ಗೆದ್ದಾಗ ಇನ್ನೂ 20 ಎಸೆತಗಳು ಬಾಕಿ ಉಳಿದಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಬರೋಡ ತಂಡಕ್ಕೆ ಆರಂಭಿಕ ಜೋಡಿ ಕೇದಾರ್ ದೇವಧರ್ ಮತ್ತು ಆದಿತ್ಯ ವಾಘ್ಮೋಡೆ 59 ರನ್‌ಗಳ ಜೊತೆಯಾಟದ ಮೂಲಕ ಭರವಸೆ ಮೂಡಿಸಿದರು. ಇವರಿಬ್ಬರ ವಿಕೆಟ್ ಕೌಶಿಕ್ ಉರುಳಿಸಿದರು. ಹಿಂದಿನ ಪಂದ್ಯದ ಹೀರೊ ಪ್ರವೀಣ್ ದುಬೆ ಅವರು ಅಭಿಮನ್ಯು ಸಿಂಗ್ ರಜಪೂತ್ ವಿಕೆಟ್ ಪಡೆದರು. ನಂತರ ಕೃಣಾಲ್ ಪಾಂಡ್ಯ ತಾಳ್ಮೆಯ ಆಟದ ಮೂಲಕ ರನ್ ಸೇರಿಸಿದರು. ಅವರು ಕೆ.ಸಿ.ಕಾರ್ಯಪ್ಪ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ ನಂತರ ತಂಡದ ವಿಕೆಟ್‌ಗಳು ಬೇಗನೇ ಉರುಳತೊಡಗಿದವು. ಭಾನು ಪನ್ಯ ಏಕಾಂಗಿ ಹೋರಾಟದ ಮೂಲಕ ತಂಡಕ್ಕೆ ಆಸರೆಯಾದರು. ಇನಿಂಗ್ಸ್‌ನ ಎರಡು ಸಿಕ್ಸರ್‌ಗಳು ಅವರ ಬ್ಯಾಟಿನಿಂದ ಬಂದವು. ಐವರು ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಟಲಾಗದೆ ಮರಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.