ವಿಜಯ್ ಹಜಾರೆ ಟ್ರೋಫಿ: ನಾಕೌಟ್ ಹಂತದ ನಿರೀಕ್ಷೆಯಲ್ಲಿ ಮನೀಷ್ ಬಳಗ ಬೆಂಗಳೂರು: ಸತತ ಎರಡು ‍ಪಂದ್ಯಗಳಲ್ಲಿ ಜಯ ಗಳಿಸಿ ಭರವಸೆಯಲ್ಲಿರುವ ಕರ್ನಾಟಕದ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಬಂಗಾಳವನ್ನು ಎದುರಿಸಲಿದೆ. ತಿರುವನಂತಪುರದ ಮಂಗಳಾಪುರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ‘ಬಿ’ ಗುಂಪಿನ ಕೊನೆಯ ಪಂದ್ಯ ಇದಾಗಿದ್ದು ಗೆದ್ದರೆ ಕ್ವಾರ್ಟರ್ ಫೈನಲ್ ಪ್ರವೇಶದ ಹಾದಿ ಸುಲಭವಾಗಲಿದೆ. ಗುಂಪಿನಲ್ಲಿ ತಮಿಳುನಾಡು ಮತ್ತು ಕರ್ನಾಟಕ ನಾಲ್ಕು ಪಂದ್ಯಗಳ ಪೈಕಿ ತಲಾ ಮೂರನ್ನು ಗೆದ್ದುಕೊಂಡಿವೆ. ಆದರೆ ರನ್‌ ರೇಟ್ ಆಧಾರದಲ್ಲಿ ತಮಿಳುನಾಡು ಅಗ್ರ ಸ್ಥಾನದಲ್ಲಿದೆ. ಪುದುಚೇರಿ ಮತ್ತು ಬಂಗಾಳ ತಲಾ ಎರಡು ಪಂದ್ಯಗಳಲ್ಲಿ ಗೆದ್ದು ಎರಡಲ್ಲಿ ಸೋತಿವೆ. ಬಂಗಾಳಕ್ಕೆ ನೌಕೌಟ್ ಹಂತ ಪ್ರವೇಶದ ಹಾದಿ ಕಠಿಣವಾಗಿದೆ. ಆದ್ದರಿಂದ ಮಂಗಳವಾರದ ಪಂದ್ಯದಲ್ಲಿ ಭಾರಿ ಅಂತರದ ಜಯದ ಕನಸಿನೊಂದಿಗೆ ಕಣಕ್ಕೆ ಇಳಿಯಲಿದೆ. ಮೊದಲ ಪಂದ್ಯದಲ್ಲಿ 236 ರನ್‌ಗಳಿಂದ ಪುದುಚೇರಿಯನ್ನು ಮಣಿಸಿದ್ದ ಕರ್ನಾಟಕ ನಂತರ ಮುಗ್ಗರಿಸಿತ್ತು. ಎರಡನೇ ಪಂದ್ಯದಲ್ಲಿ ತಮಿಳುನಾಡಿಗೆ ಎಂಟು ವಿಕೆಟ್‌ಗಳಿಂದ ಮಣಿದಿತ್ತು. ಆದರೆ ಮುಂಬೈ ಮತ್ತು ಬರೋಡಾ ವಿರುದ್ಧ ಉತ್ತಮ ಸಾಮರ್ಥ್ಯ ತೋರಿ ಲಯಕ್ಕೆ ಮಣಿದಿತ್ತು. ಮುಂಬೈಯನ್ನು ಏಳು ವಿಕೆಟ್‌ಗಳಿಂದ ಮತ್ತು ಬರೋಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತ್ತು. ಆರ್‌.ಸಮರ್ಥ್‌ ಮತ್ತು ಕೆ.ವಿ.ಸಿದ್ಧಾರ್ಥ್‌ ಬ್ಯಾಟಿಂಗ್‌ನಲ್ಲಿ ಅಮೋಘ ಸಾಮರ್ಥ್ಯ ಪ್ರದರ್ಶಿಸುತ್ತಿದ್ದು ನಿರ್ಣಾಯಕ ಘಟ್ಟದಲ್ಲಿ ತಂಡದ ಕೈಹಿಡಿದು ಜಯದತ್ತ ಸಾಗಿಸಿದ್ದಾರೆ. ಬೌಲಿಂಗ್‌ನಲ್ಲಿ ಸ್ಪಿನ್ನರ್ ಪ್ರವೀಣ್ ದುಬೆ ಮಿಂಚುತ್ತಿದ್ದು ಹಿಂದಿನ ಎರಡು ಪಂದ್ಯಗಳಲ್ಲಿ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದ್ದಾರೆ. ಅವರಿಗೆ ಕೆ.ಸಿ.ಕಾರ್ಯಪ್ಪ ಅವರಿಂದ ಉತ್ತಮ ಸಹಕಾರ ಸಿಗುತ್ತಿದೆ. ಬಂಗಾಳ ತಂಡದಲ್ಲಿ ಶಹಬಾಜ್ ಅಹಮ್ಮದ್ ಅವರನ್ನು ಹೊರತುಪಡಿಸಿದರೆ ಬ್ಯಾಟಿಂಗ್‌ನಲ್ಲಿ ಇತರ ಯಾರಿಂದಲೂ ನಿರೀಕ್ಷೆಗೆ ತಕ್ಕ ಪ್ರದರ್ಶನ ಕಂಡುಬಂದಿಲ್ಲ. ಬೌಲಿಂಗ್‌ನಲ್ಲಿ ಆಕಾಶ್‌ದೀಪ್ ಮಾತ್ರ ಈ ವರೆಗೆ ಮಿಂಚಿದ್ದಾರೆ. ತಂಡಗಳು: ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಆರ್‌.ಸಮರ್ಥ್‌, ರಿತೇಶ್ ಭಟ್ಕಳ್‌, ಕೆ.ಸಿ.ಕಾರ್ಯಪ್ಪ, ಎಂ.ಬಿ.ದರ್ಶನ್‌, ಪ್ರವೀಣ್ ದುಬೆ, ಶ್ರೇಯಸ್ ಗೋಪಾಲ್‌, ಪ್ರತೀಕ್ ಜೈನ್, ರೋಹನ್ ಕದಂ, ವಿ.ಕೌಶಿಕ್‌, ಅಭಿನವ್ ಮನೋಹರ್‌, ಕರುಣ್ ನಾಯರ್‌, ಡಿ. ನಿಶ್ಚಿಲ್‌, ವಿದ್ಯಾಧರ್ ಪಾಟೀಲ್‌, ಎಸ್‌.ಶರತ್‌, ಬಿ.ಆರ್.ಶರತ್‌, ಕೆ.ಸಿದ್ಧಾರ್ಥ್‌, ಜೆ.ಸುಚಿತ್, ಎಂ.ವೆಂಕಟೇಶ್‌, ವೈಶಾಖ್ ವಿಜಯಕುಮಾರ್‌. ಬಂಗಾಳ: ಸುದೀಪ್ ಚಟರ್ಜಿ (ನಾಯಕ), ಆಕಾಶ್ ದೀಪ್‌, ಸುವಂಕರ್‌ ಬಾಲ್‌, ವೃತಿಕ್ ಚಟರ್ಜಿ, ಅಭಿಷೇಕ್ ದಾಸ್‌, ಸಯಾನ್ ಘೋಷ್‌, ಶ್ರೀವತ್ಸ್‌ ಗೋಸ್ವಾಮಿ (ವಿಕೆಟ್ ಕೀಪರ್), ಸುಮಂತ ಗುಪ್ತ, ಕೈಫ್ ಅಹಮ್ಮದ್‌, ಕರಣ್ ಲಾಲ್‌, ರಣ್‌ಜೋತ್‌ ಖೈರ, ಅನುಷ್ಠುಪ್ ಮಜುಂದಾರ್‌, ಮೊಹಮ್ಮದ್ ಕೈಫ್‌, ಸಯಾನ್ ಮಂಡಲ್‌, ಮುಖೇಶ್ ಕುಮಾರ್, ಪ್ರದೀಪ್ತ ಪ್ರಮಾಣಿಕ್, ಗೀತ್ ಪುರಿ, ಋತ್ವಿಕ್ ರಾಯ್‌, ಶಹಬಾಜ್ ಅಹಮ್ಮದ್‌, ಸುಜಿತ್ ಯಾದವ್‌. ಪಂದ್ಯ ಆರಂಭ: ಬೆಳಿಗ್ಗೆ 9.00 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.