ಐಸಿಸಿಯಲ್ಲಿ ಪಾಕಿಸ್ತಾನಕ್ಕೆ ಕೆಟ್ಟ ಹೆಸರು: ಸಿಇಒ ಕಳವಳ ಕರಾಚಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ನೋಟಿಸ್ ಬೋರ್ಡ್‌ನಲ್ಲಿ ಪಾಕಿಸ್ತಾನದ ಕುರಿತು ಬಹಳ ನಕಾರಾತ್ಮಕವಾದ ಸಂಗತಿಗಳು ರಾರಾಜಿಸುತ್ತಿವೆ. ಇದರಿಂದಾಗಿ ದೇಶದ ಕ್ರಿಕೆಟ್‌ ಮಾತ್ರವಲ್ಲ ಪ್ರವಾಸೋದ್ಯಮ ಮತ್ತು ವಾಣಿಜ್ಯ ವ್ಯವಹಾರಗಳ ಮೇಲೂ ಕೆಟ್ಟ ಪರಿಣಾಮಗಳಾಗುತ್ತಿವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೈಸಲ್ ಹಸನೈನ್ ಹೇಳಿದ್ದಾರೆ. ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಕ್ರಿಕೆಟ್‌ ವರ್ಚಸ್ಸು ಚೆನ್ನಾಗಿಲ್ಲ. ನಾನು ಐಸಿಸಿಯಲ್ಲಿ ಮತ್ತು ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೂ ಈ ವಿಷಯವನ್ನು ಗಮನಿಸಿದ್ದೇನೆ. ಪಾಕ್ ಕ್ರಿಕೆಟ್‌ ಬಗ್ಗೆ ನಡೆಯುವ ನಕಾರಾತ್ಮಕ ಮಾತುಕತೆಗಳ ಕುರಿತು ಅರಿವಿದೆ’ ಎಂದಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾಕ್ ಕ್ರಿಕೆಟ್‌ ವರ್ಚಸ್ಸು ಇದೇ ರೀತಿ ಮುಂದುವರಿದರೆ, ಅಂತರರಾಷ್ಟ್ರೀಯ ಟೂರ್ನಿಗಳಿಗೆ ಆತಿಥ್ಯ ವಹಿಸುವುದು ಕಷ್ಟವಾಗುತ್ತದೆ. ಹೊರದೇಶಗಳ ತಂಡಗಳು ಇಲ್ಲಿಗೆ ಬಂದಲು ಆಡಲು ಹಿಂಜರಿಯುತ್ತವೆ’ ಎಂದು ಫೈಸಲ್ ಅಭಿಪ್ರಾಯಪಟ್ಟಿದ್ದಾರೆ. ‘ಕ್ರಿಕೆಟ್ ಸೇವಾ ವಲಯದ ಉದ್ಯಮವಾಗಿದೆ. ಅದರ ಮೂಲಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಪ್ರಚಾರಪಡಿಸಿ, ಮಾರಾಟ ಮಾಡಲು ಯತ್ನಿಸುತ್ತೇವೆ. ಆದರೆ, ಈಚೆಗೆ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಜನರಿಂದ ಸಿಕ್ಕ ಸ್ಪಂದನೆ ನಿರಾಶಾದಾಯಕವಾಗಿತ್ತು. ಪಾಕ್ ಕ್ರಿಕೆಟ್ ಬೆಳವಣಿಗೆಗೆ ಮಾಧ್ಯಮಗಳು ಸಕಾರಾತ್ಮಕ ಸ್ಪಂದನೆ ನೀಡಬೇಕು’ ಎಂದು ಹೇಳಿದರು. ಯಾಸೀರ್ ಮೇಲೆ ರಮೀಜ್ ಗರಂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಕ್ರಿಕೆಟಿಗ ಯಾಸೀರ್ ಶಾ ಅವರಿಂದಾಗಿ ಪಾಕಿಸ್ತಾನ ಕ್ರಿಕೆಟ್‌ಗೆ ಕೆಟ್ಟ ಹೆಸರು ಬಂದಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ರಮೀಜ್ ರಾಝಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಮ್ಮ ಸ್ನೇಹಿತನ ಬೆಂಬಲಕ್ಕೆ ನಿಂತ ಯಾಸೀರ್ ಮೇಲೆ ಇಸ್ಲಾಮಾಬಾದ್‌ನ ಶಾಲಿಮಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಮೀಜ್, ‘ಕ್ರಿಕೆಟಿಗರಿಗೆ ಆಡುವುದರ ಜೊತೆಗೆ ಸಮಾಜದ ರಾಯಭಾರಿಗಳಾಗುವುದನ್ನೂ ಕಲಿಸಲಾಗಿರುತ್ತದೆ. ಆದರೆ, ಯಾಸೀರ್ ಅವರಂತಹ ಮತಿಹೀನರು ಸಮಾಜವಿರೋಧಿಯಾಗುತ್ತಾರೆಂಬುದೇ ಬೇಸರದ ಸಂಗತಿ’ ಎಂದಿದ್ದಾರೆ. ‘ಈ ಪ್ರಕರಣದಲ್ಲಿ ಸತ್ಯಾಂಶ ಎಷ್ಟಿದೆಯೆಂಬುದು ನಿಖರವಾಗಿ ನನಗೆ ಗೊತ್ತಿಲ್ಲ. ಆದರೆ, ಪಾಕಿಸ್ತಾನ ಕ್ರಿಕೆಟ್ ಮತ್ತು ಕ್ರಿಕೆಟಿಗರ ಕುರಿತು ಇಂತಹ ನಕಾರಾತ್ಮಕ ತಲೆಬರಹಗಳು ಮಾಧ್ಯಮಗಳಲ್ಲಿ ಬರಬಾರದು. ಅದೂ ಈ ದೇಶದ ಕ್ರಿಕೆಟ್‌ ಕ್ಷೇತ್ರವು ಮತ್ತೆ ಉತ್ತಮ ದಿನಗಳತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಕೆಟ್ಟ ಸುದ್ದಿಗಳಿಂದ ಹಿನ್ನಡೆಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.