ಮಿಚೆಲ್ ಸ್ಟಾರ್ಕ್‌ ಬಿರುಗಾಳಿಗೆ ಚದುರಿದ ರೂಟ್ ಬಳಗ ಅಡಿಲೇಡ್ (ಎಪಿ): ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಬಿರುಗಾಳಿ ವೇಗದ ಎಸೆತಗಳ ಮುಂದೆ ಇಂಗ್ಲೆಂಡ್ ತಂಡದ ಆಟ ನಡೆಯಲಿಲ್ಲ. ನಾಯಕ ಜೋ ರೂಟ್ ಮತ್ತು ಡೆವಿಡ್ ಮಲಾನ್ ಅವರ ಅರ್ಧಶತಕ ಗಳಿಸಿದರೂ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಹಿನ್ನಡೆ ಅನುಭವಿಸಿತು. ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯರು 237 ರನ್‌ಗಳ ಭಾರಿ ಮುನ್ನಡೆ ಗಳಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 9 ವಿಕೆಟ್‌ಗಳಿಗೆ 473 ರನ್ ಗಳಿಸಿಡಿಕ್ಲೇರ್ ಮಾಡಿತ್ತು. ಅದಕ್ಕುತ್ತರವಾಗಿ ಪ್ರವಾಸಿ ಬಳಗವು 84.1 ಓವರ್‌ಗಳಲ್ಲಿ 236 ರನ್ ಗಳಿಸಿ ಆಲೌಟ್ ಆಯಿತು.ಇಂಗ್ಲೆಂಡ್ ತಂಡದ ನಾಲ್ವರು ಪ್ರಮುಖ ಬ್ಯಾಟ್ಸ್‌ಮನ್‌ಗಳ ವಿಕೆಟ್ ಉರುಳಿಸಿದ ಸ್ಟಾರ್ಕ್ ಮಿಂಚಿದರು. ಎರಡನೇ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು 17 ಓವರ್‌ಗಳಲ್ಲಿ 1 ವಿಕೆಟ್‌ಗೆ 45 ರನ್ ಗಳಿಸಿದೆ. ಮಾರ್ಕಸ್ ಹ್ಯಾರಿಸ್ (ಬ್ಯಾಟಿಂಗ್ 21) ಮತ್ತು ಮಿಚೆಲ್ ನೆಸರ್ (ಬ್ಯಾಟಿಂಗ್ 2) ಕ್ರೀಸ್‌ನಲ್ಲಿದ್ದಾರೆ. ತಂಡವು ಒಟ್ಟು 282 ರನ್‌ಗಳ ಮುನ್ನಡೆ ಗಳಿಸಿದೆ. ಸ್ಟಾರ್ಕ್‌ ಅರ್ಧಶತಕ! ಪಿಂಕ್ ಬಾಲ್ ಟೆಸ್ಟ್‌ಗಳಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಸ್ಟಾರ್ಕ್ ಶನಿವಾರ ಹೊಸ ದಾಖಲೆ ಬರೆದರು. ಹಗಲು–ರಾತ್ರಿ ಟೆಸ್ಟ್‌ಗಳಲ್ಲಿ 50 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಜೋಶ್ ಹ್ಯಾಜಲ್‌ವುಡ್ ಅವರಿಗಿಂತ ಸ್ಟಾರ್ಕ್ 18 ವಿಕೆಟ್‌ಗಳನ್ನು ಹೆಚ್ಚು ಗಳಿಸಿದ್ದಾರೆ. ಈ ಪಂದ್ಯದಲ್ಲಿ ಅವರಿಗೆ ಕ್ಯಾಮರಾನ್ ಗ್ರೀನ್ (24ಕ್ಕೆ2) ಉತ್ತಮ ಜೊತೆ ನೀಡಿದರು. ಇದರಿಂದಾಗಿ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ಪರದಾಡಿದರು. ಇಂಗ್ಲೆಂಡ್ ತಂಡದ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಲು ರೂಟ್ ಮತ್ತು ಮಲಾನ್ ಪ್ರಯತ್ನಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 138 ರನ್ ಗಳಿಸಿದರು. ಶುಕ್ರವಾರ ಸಂಜೆ 12 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡದಲ್ಲಿ ಆತ್ಮವಿಶ್ವಾಸ ತುಂಬುವಂತೆ ಆಡಿದರು. ಸ್ಟಾರ್ಕ್, ಜೇ ರಿಚರ್ಡ್ಸನ್, ನೇಥನ್ ಲಯನ್ ಮತ್ತು ಮಿಚೆಲ್ ನೆಸರ್ ಅವರ ಪರಿಣಾಮಕಾರಿ ದಾಳಿಯನ್ನು ದಿನದಾಟದ ಮೊದಲ ಅವಧಿಯಲ್ಲಿ ಎದುರಿಸಿ ನಿಂತಿದ್ದು ವಿಶೇಷ. ಆದರೆ, 46ನೇ ಓವರ್‌ನಲ್ಲಿ ಈ ರೂಟ್ ವಿಕೆಟ್ ಗಳಿಸುವ ಮೂಲಕ ಗ್ರೀನ್ ಜೊತೆಯಾಟ ಮುರಿದರು. ಇದಾಗಿ ಐದು ಓವರ್‌ಗಳ ನಂತರ ಮಲಾನ್ ವಿಕೆಟ್ ಕಬಳಿಸುವಲ್ಲಿ ಸ್ಟಾರ್ಕ್ ಸಫಲರಾದರು. ಜೋಸ್ ಬಟ್ಲರ್ ಮತ್ತು ಸ್ಟುವರ್ಟ್ ಬ್ರಾಡ್ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು. ಎರಡನೇ ದಿನದಾಟದಲ್ಲಿ ಅವರು ಆರಂಭಿಕ ಬ್ಯಾಟರ್ ರೊರಿ ಬರ್ನ್ಸ್ ವಿಕೆಟ್ ಕೂಡ ಗಳಿಸಿದ್ದರು. ಸ್ಪಿನ್ನರ್ ಲಯನ್ ಕೂಡ ಮೂರು ವಿಕೆಟ್ ಕಬಳಿಸಿ ತಂಡದ ಪತನಕ್ಕೆ ಕೈಜೋಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.