ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್: ಪ್ರೀಕ್ವಾರ್ಟರ್‌ ಫೈನಲ್ ಭಾನುವಾರ ಜೈಪುರ (ಪಿಟಿಐ): ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಭಾನುವಾರ ಕೆ.ಎಲ್. ಸೈನಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ರಾಜಸ್ಥಾನ ತಂಡದ ಸವಾಲು ಎದುರಿಸಲಿದೆ. ಟೂರ್ನಿಯ ‘ಇ’ ಗುಂಪಿನಲ್ಲಿ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿರುವ ರಾಜಸ್ಥಾನ ತಂಡವು ಕರ್ನಾಟಕಕ್ಕೆ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ. ಬಿ ಗುಂಪಿನಲ್ಲಿ ಕರ್ನಾಟಕ ತಂಡವು ತಮಿಳುನಾಡು ಮತ್ತು ಬಂಗಾಳ ತಂಡಗಳ ಎದುರು ಸೋತಿತ್ತು. ಬ್ಯಾಟಿಂಗ್‌ನಲ್ಲಿ ಆರ್. ಸಮರ್ಥ್, ಸಿದ್ಧಾರ್ಥ್, ನಾಯಕ ಪಾಂಡೆ ಮತ್ತು ವಿಕೆಟ್‌ಕೀಪರ್ ಶ್ರೀನಿವಾಸ್ ಶರತ್ ಉತ್ತಮ ಲಯದಲ್ಲಿದ್ದಾರೆ. ಆದರೆ ಅನುಭವಿ ಕರುಣ್ ನಾಯರ್ ಲಯಕ್ಕೆ ಮರಳಲು ಇನ್ನೂ ಪ್ರಯತ್ನಿಸುತ್ತಿರುವುದು ಮಧ್ಯಮ ಕ್ರಮಾಂಕದಲ್ಲಿ ಚಿಂತೆಯ ವಿಷಯವಾಗಿದೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ಜೆ. ಸುಚಿತ್ ಮತ್ತು ಕೆಸಿ ಕಾರ್ಯಪ್ಪ ಭರವಸೆ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಅನುಭವಿ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರಿಗೆ ಅವಕಾಶ ಸಿಗುವುದು ಅನುಮಾನ. ವಿ. ಕೌಶಿಕ್ ಮತ್ತು ಪ್ರತೀಕ್ ಜೈನ್ ಭರವಸೆ ಮೂಡಿಸಿರುವ ಮಧ್ಯಮವೇಗಿಗಳು. ದೀಪಕ್ ಹೂಡಾ ನಾಯಕತ್ವದ ರಾಜಸ್ಥಾನ ತಂಡದ ಅಭಿಜಿತ್ ತೋಮರ್ ಮತ್ತು ಶುಭಂ ಶರ್ಮಾ ಅವರ ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಐಪಿಎಲ್‌ನಲ್ಲಿ ಮಿಂಚಿರುವ ಸ್ಪಿನ್ನರ್ ರವಿ ಬಿಷ್ಣೋಯಿ, ಕಮಲೇಶ್ ನಾಗರಕೋಟಿ ಮತ್ತು ಖಲೀಲ್ ಅಹಮದ್ ತಂಡದ ಬೌಲಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ. ಕರ್ನಾಟಕದ ಅನುಭವಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇವರ ಮುಂದಿದೆ. ತಂಡಗಳು ಕರ್ನಾಟಕ: ಮನೀಷ್ ಪಾಂಡೆ (ನಾಯಕ), ರೋಹನ್ ಕದಂ, ಆರ್. ಸಮರ್ಥ್, ಕರುಣ್ ನಾಯರ್, ಕೆ.ವಿ. ಸಿದ್ಧಾರ್ಥ್, ಅಭಿನವ್ ಮನೋಹರ್, ಶ್ರೀನಿವಾಸ್ ಶರತ್ (ವಿಕೆಟ್‌ಕೀಪರ್), ಬಿ.ಆರ್. ಶರತ್ (ವಿಕೆಟ್‌ಕೀಪರ್), ಜೆ. ಸುಚಿತ್, ಶ್ರೇಯಸ್ ಗೋಪಾಲ್, ಕೆ.ಸಿ. ಕಾರ್ಯಪ್ಪ, ರಿತೇಶ್ ಭಟ್ಕಳ್, ವಿದ್ಯಾಧರ್ ಪಾಟೀಲ. ವಿ. ಕೌಶಿಕ್, ಪ್ರತೀಕ್ ಜೈನ್, ಎಂ.ಬಿ. ದರ್ಶನ್, ವಿಜಯಕುಮಾರ್ ವೈಶಾಖ, ವೆಂಕಟೇಶ್ ಮುರಳಿಧರ್, ಡಿ. ನಿಶ್ಚಲ್. ರಾಜಸ್ಥಾನ: ದೀಪಕ್ ಹೂಡಾ (ನಾಯಕ), ಖಲೀಲ್ ಅಹಮದ್, ಶಿವ ಚೌಹಾಣ್, ರಜತ್ ಚೌಧರಿ, ಶುಭಂ ಘರ್‌ವಾಲ್, ದೀಪಕ್ ಕರ್‌ವಾಸರ್, ಮಣೀಂದರ್ ನರೇಂದರ್ ಸಿಂಗ್, ರವಿ ಬಿಷ್ಣೋಯಿ, ಶುಭಂ ಶರ್ಮಾ, ಅಭಿಜಿತ್ ತೋಮರ್, ಮಹಿಪಾಲ್ ಲೊಮ್ರೊರ್, ಅರಾಫತ್ ಖಾನ್, ಅನಿಕೇತ್ ಚೌಧರಿ, ಚಂದ್ರಪಾಲ್ ಸಿಂಗ್, ಮೋಹಿತ್ ಜೈನ್, ಸಲ್ಮಾನ್ ಖಾನ್, ಕಮಲೇಶ್ ನಾಗರಕೋಟಿ, ಸಂಪ್ರೀತ್ ಜೋಶಿ, ಮಾನವ್ ಸುತಾರ್, ತನ್ವೀರ್ ಉಲ್ ಹಕ್. ಇಂದಿನ ಪಂದ್ಯಗಳು ಕರ್ನಾಟಕ–ರಾಜಸ್ಥಾನ ಕೆ.ಎಲ್. ಸೈನಿ ಕ್ರೀಡಾಂಗಣ –– ವಿದರ್ಭ–ತ್ರಿಪುರಾ ಸವಾಯ್ ಮಾನಸಿಂಗ್ ಕ್ರೀಡಾಂಗಣ –– ಉತ್ತರಪ್ರದೇಶ–ಮಧ್ಯಪ್ರದೇಶ ಜಯಪ್ರಿಯಾ ವಿದ್ಯಾಲಯ ಮೈದಾನ (ಎಲ್ಲ ಪಂದ್ಯಗಳೂ ಬೆಳಿಗ್ಗೆ 9ರಿಂದ ಆರಂಭ) ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.