ಸ್ನೇಹಿತೆ ಜೀವವುಳಿಸಿದ ಟ್ರಾಫಿಕ್ ಪೊಲೀಸ್‌ಗೆ ಸಚಿನ್ ಕೃತಜ್ಞತೆ ಮುಂಬೈ: ಅಪಘಾತವೊಂದರಲ್ಲಿ ಗಾಯಗೊಂಡಿದ್ದ ತಮ್ಮ ಸ್ನೇಹಿತರೊಬ್ಬರ ಪ್ರಾಣ ಉಳಿಸಲು ಸಹಾಯ ಮಾಡಿದ ಸಂಚಾರ ವಿಭಾಗದ ಪೊಲೀಸ್ ಪೇದೆಯನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಷಯವನ್ನು ಟ್ವೀಟ್ ಮಾಡಿರುವ ಸಚಿನ್, ‘ಇಂತಹ ಒಳ್ಳೆಯ ವ್ಯಕ್ತಿಗಳು ಇರುವುದರಿಂದಲೇ ಜಗತ್ತು ಸುಂದರವಾಗಿದೆ. ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತೆಯೊಬ್ಬರು ರಸ್ತೆ ಅಪಘಾತಕ್ಕೊಳಗಾದರು. ಆಗ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಕಾನ್ಸ್‌ಟೇಬಲ್ ತೀವ್ರವಾಗಿ ಗಾಯಗೊಂಡಿದ್ದ ಸ್ನೇಹಿತೆಯನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದರು. ತಾವೇ ಆಸ್ಪತ್ರೆಗೂ ತೆರಳಿ, ಆಕೆಗೆ ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಆಕೆಯ ಬೆನ್ನುಹುರಿಗೆ ಬಲವಾದ ಏಟು ಬಿದ್ದಿತ್ತು. ಆದರೆ, ಸಕಾಲಿಕ ಚಿಕಿತ್ಸೆಯಿಂದ ಜೀವ ಉಳಿಯಿತು. ಅದಕ್ಕೆ ಕಾರಣವಾದವರು ಪೊಲೀಸ್ ಕಾನ್ಸ್‌ಟೇಬಲ್’ ಎಂದಿದ್ದಾರೆ. ‘ಅವರನ್ನು (ಪೊಲೀಸ್) ನಾನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದೆ. ತಮ್ಮ ಕರ್ತವ್ಯದ ವ್ಯಾಪ್ತಿಯಾಚೆಗೆ ಅವರು ಈ ಸಹಾಯ ಮಾಡಿದ್ದಾರೆ. ಸಾರ್ವಜನಿಕರ ಒಳಿತಿಗಾಗಿ ತುಡಿಯುವ ಮತ್ತು ದುಡಿಯುವ ಇಂತಹ ವ್ಯಕ್ತಿಗಳನ್ನು ಕಂಡಾಗ ಕೃತಜ್ಞತೆ ಸಲ್ಲಿಸುವುದನ್ನು ಯಾರೂ ಮರೆಯಬಾರದು. ಕೆಲವರಂತೂ ತಮ್ಮದೇ ಆದ ರೀತಿಯಲ್ಲಿ ಶಾಂತವಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ’ ಎಂದು ಸಚಿನ್ ಬರೆದಿದ್ದಾರೆ. ‘ಭಾರತದಾದ್ಯಂತ ಇರುವ ಸಂಚಾರ ಪೊಲೀಸರ ಕಾರ್ಯತತ್ಪರತೆಯನ್ನು ಅಭಿನಂದಿಸುತ್ತೇನೆ. ಜನರ ಸುರಕ್ಷತೆಗಾಗಿ ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು, ವಾಹನ ಸಂಚಾರರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪೊಲೀಸರನ್ನು ಗೌರವಿಸಿ‘ ಎಂದು ಬ್ಯಾಟಿಂಗ್ ಚಾಂಪಿಯನ್ ಉಲ್ಲೇಖಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.