ಜೂನಿಯರ್‌ ಎಚ್‌ಪಿಎಲ್‌ ಕ್ರಿಕೆಟ್‌: ‘ಸೂಪರ್‌’ ಜಯದೊಂದಿಗೆ ಕಿಂಗ್ಸ್‌ ಚಾಂಪಿಯನ್‌ ಹುಬ್ಬಳ್ಳಿ: ರೋಚಕ ಅಂತ್ಯಕಂಡ ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸಿದ ವಿ.ವಿ. ಸೂಪರ್‌ ಕಿಂಗ್ಸ್‌ ತಂಡ ಸ್ವರ್ಣ ಜೂನಿಯರ್‌ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯ ನಾಲ್ಕನೇ ಆವೃತ್ತಿಯಲ್ಲಿ ಚಾಂಪಿಯನ್‌ ಆಯಿತು. ಬಾಣಜಿ ಡಿ. ಕಿಮ್ಜಿ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯ ನೆರೆದಿದ್ದ ಕೆಲ ಕ್ರಿಕೆಟ್‌ ಪ್ರೇಮಿಗಳನ್ನು ಕೊನೆಯ ಎಸೆತದ ತನಕ ತುದಿಗಾಲಿನಲ್ಲಿ ನಿಂತುಕೊಂಡು ಕುತೂಹಲದಿಂದ ವೀಕ್ಷಿಸುವಂತೆ ಮಾಡಿತು. ಮೊದಲು ಬ್ಯಾಟ್‌ ಮಾಡಿದ್ದ ಸೂಪರ್‌ ಕಿಂಗ್ಸ್‌ 30 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿತು. ಎದುರಾಳಿ ಹುಬ್ಬಳ್ಳಿಯ ಎಸ್‌ಆರ್‌ಎಂ ಪಿಂಕ್‌ ಪ್ಯಾಂಥರ್ಸ್‌ ಕೂಡ ಇಷ್ಟೇ ವಿಕೆಟ್‌ ಕಳೆದುಕೊಂಡು ಇಷ್ಟೇ ರನ್ ಗಳಿಸಿ ಸಮಬಲ ಸಾಧಿಸಿತು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಐಪಿಎಲ್‌ ಮಾದರಿಯಲ್ಲಿ ‘ಸೂಪರ್‌ ಓವರ್‌’ ಮೊರೆ ಹೋಗಲಾಯಿತು. ಪಿಂಕ್‌ ಪ್ಯಾಂಥರ್ಸ್‌ ಮೊದಲು ಬ್ಯಾಟ್ ಮಾಡಿ 0.2 ಓವರ್‌ಗಳಲ್ಲಿ 3 ರನ್‌ ಗಳಿಸಿ ಎರಡು ವಿಕೆಟ್‌ ಕಳೆದುಕೊಂಡಿತು. ಒಂದಂಕಿ ಮೊತ್ತದ ಗುರಿಯನ್ನು ಸೂಪರ್‌ ಕಿಂಗ್ಸ್‌ ತನ್ನ ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸುವ ಮೂಲಕ ತಲುಪಿತು. ಚಾಂಪಿಯನ್‌ ತಂಡದ ಭುವನ ಬಸಿಡೋಣಿ ಎರಡು ವಿಕೆಟ್‌ ಹಾಗೂ ಮಣಿಕಂಠ ಬುಕಿಟಗಾರ ಬೌಂಡರಿ ಬಾರಿಸಿ ‘ಸೂಪರ್‌ ಓವರ್‌’ನ ಹೀರೊ ಎನಿಸಿದರು. ಸ್ವರ್ಣ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಎಸ್‌ವಿ ಪ್ರಸಾದ, ಬಿಡಿಕೆ ಟ್ರಸ್ಟಿ ಬಾಬಾ ಭೂಸದ, ಕಾರ್ಯದರ್ಶಿ ಪಂಕಜ ಮುನಾವರ, ಪ್ರಶಾಂತ ಶೆಟ್ಟಿ, ಶಿವಾನಂದ ಗುಂಜಾಳ, ವಿನಾಯಕ ಗುಡಿ, ಮನೀಷ ಠಕ್ಕರ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ವೈಯಕ್ತಿಕ ಪ್ರಶಸ್ತಿಗಳು 14 ವರ್ಷದೊಳಗಿನ ವಿಭಾಗ: ಬೆಳಗಾವಿಯ ಬಿಎಸ್‌ಸಿ ಕೆ.ಆರ್‌. ಶೆಟ್ಟಿ ಕಿಂಗ್ಸ್‌ ತಂಡದ ಅಶುತೋಷ ಹಿರೇಮಠ (ಅತ್ಯುತ್ತಮ ಬ್ಯಾಟ್ಸ್‌ಮನ್‌), ಪಿಂಕ್‌ ಪ್ಯಾಂಥರ್ಸ್‌ನ ಶ್ರೇಯನ್ಸ್‌ ನಾಗನೂರ (ಪಂದ್ಯದ ಅಕಾಡೆಮಿ ಆಟಗಾರ), ಶ್ರೇಯನ್ಸ್‌ ನಾಗನೂರ (ಅತ್ಯುತ್ತಮ ಬೌಲರ್‌), ಸೂಪರ್‌ ಕಿಂಗ್ಸ್‌ನ ಭುವನ ಬಸಿಡೋಣಿ (ಟೂರ್ನಿ ಶ್ರೇಷ್ಠ ಆಟಗಾರ). 16 ವರ್ಷದೊಳಗಿನ ವಿಭಾಗ:ಸೂಪರ್‌ ಕಿಂಗ್ಸ್‌ ತಂಡದ ಮಣಿಕಂಠ (ಪಂದ್ಯಶ್ರೇಷ್ಠ), ನಮ್ಮ ಗದಗ ಕ್ರಿಕೆಟರ್ಸ್ ತಂಡದ ಯಶಸ್‌ ಕುರುಬರ (ಅತ್ಯುತ್ತಮ ಬ್ಯಾಟ್ಸ್‌ಮನ್‌), ಪಿಂಕ್‌ ಪ್ಯಾಂಥರ್ಸ್‌ನ ರೋಹಿತ್‌ ಯರೇಸೀಮಿ (ಅತ್ಯುತ್ತಮ ಬೌಲರ್‌) ಮತ್ತು ಮಣಿಕಂಠ (ಟೂರ್ನಿ ಶ್ರೇಷ್ಠ ಆಟಗಾರ) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.