ಬಿಸಿಸಿಐ ವೈದ್ಯಾಧಿಕಾರಿ ಅಭಿಜಿತ್ ಸಾಳ್ವಿ ರಾಜೀನಾಮೆ ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ವೈದ್ಯಾಧಿಕಾರಿ ಅಭಿಜಿತ್ ಸಾಳ್ವಿ ವೈಯಕ್ತಿಕ ಕಾರಣಗಳಿಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಎರಡು ತಿಂಗಳುಗಳ ಹಿಂದೆಯೇ ರಾಜೀನಾಮೆ ಕೊಟ್ಟಿದ್ದರು. ನವೆಂಬರ್ 30ಕ್ಕೆ ಅವರ ಕಾರ್ಯಾವಧಿ ಮುಗಿದಿತ್ತು. ಆದರೆ, ಡಿಸೆಂಬರ್ 7ರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯ ಇದ್ದ ಕಾರಣ ಕರ್ತವ್ಯದಲ್ಲಿ ಮುಂದುವರಿದ್ದರು. ‘ಕ್ರಿಕೆಟ್‌ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕೆ ಬಿಸಿಸಿಐಗೆ ಕೃತಜ್ಞತೆಗಳು. 10 ವರ್ಷಗಳಿಂದ ಇಲ್ಲಿ ಕೆಲಸ ಮಾಡಿದ ಅನುಭವವು ಅಮೂಲ್ಯವಾದದ್ದು. ಕೋವಿಡ್‌ ಕಾಲಘಟ್ಟದಲ್ಲಿ ದಿನದ 24 ಗಂಟೆಯೂ ಕೆಲಸ ಮಾಡುವ ಒತ್ತಡವಿದೆ. ಕುಟುಂಬದೊಂದಿಗೆ ಕಾಲ ಕಳೆಯಲು ಸಮಯ ಸಿಕ್ಕಿಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಸಾಳ್ವಿ ಶನಿವಾರ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.