ಬೆಂಗಳೂರು: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ ಬೆಂಗಳೂರು: ಆರಂಭಿಕ ಬ್ಯಾಟರ್ ಪ್ರಕಾಶ್ ಜಯರಾಮಯ್ಯ ಮತ್ತು ನಾಯಕ ವೆಂಕಟೇಶ್ವರ ರಾವ್ ಅವರ ಅಮೋಘ ಶತಕವು ಭಾರತ ಅಂಧರ ಕ್ರಿಕೆಟ್‌ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿತು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶುಕ್ರವಾರ ನಡೆದ ಇಂಡಸ್ ಇಂಡ್ ಬ್ಯಾಂಕ್ ಪ್ರಾಯೋಜಿತ ಟ್ವೆಂಟಿ20 ಟೂರ್ನಿಯ ಪಂದ್ಯದಲ್ಲಿ ಭಾರತ 124ರನ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿತು. 279 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪ್ರವಾಸಿ ತಂಡ ಆರಂಭದಲ್ಲಿ ವೇಗವಾಗಿ ರನ್ ಗಳಿಸಿ ನಿರೀಕ್ಷೆ ಮೂಡಿಸಿತು. ಮಹಮದ್ ಅಬ್ದುಲ್ ಮಲಿಕ್ ಹಾಗೂ ಅರೀಫ್ ಉಲ್ಲಾ ಅರ್ಧಶತಕ ಪೂರೈಸಿದರು. ಇವರಿಬ್ಬರು ಔಟಾದ ನಂತರ ಕ್ರೀಸಿಗೆ ಬಂದ ಯಾರಿಗೂ ಹೆಚ್ಚು ಹೊತ್ತು ನಿಲ್ಲಲು ಆಗಲಿಲ್ಲ. ನಾಯಕ ಮೊಹಮ್ಮದ್ ರೆಹಮಾನ್ ಔಟಾಗದೆ ಉಳಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ತಂಡಕ್ಕೆ 154ರನ್ ಗಳಿಸಲಷ್ಟೇ ಸಾಧ್ಯವಾಯಿತು. ‌ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡ ಆರಂಭದಲ್ಲೇ ನಕುಲ್ ಹಾಗೂ ಓಂಪ್ರಕಾಶ್ ಅವರ ವಿಕೆಟ್ ಕಳೆದುಕೊಂಡಿತು. ದೀಪಕ್ ಮಲಿಕ್ ಅವರು ಪ್ರಕಾಶ್ ಜಯರಾಮಯ್ಯ ಅವರಿಗೆ ಉತ್ತಮ ಸಹಕಾರ ನೀಡಿದರು. ಆರಂಭದಿಂದಲೇ ಸ್ಫೋಟಕ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಪ್ರಕಾಶ್ ಜಯರಾಮಯ್ಯ ಅವರು ಮಲಿಕ್ ಔಟಾದ ಮೇಲೆ ವೆಂಕಟೇಶ್ವರ ರಾವ್ ಅವರೊಂದಿಗೆ ಭರ್ಜರಿ ಜೊತೆಯಾಟವಾಡಿದರು. ಇಬ್ಬರೂ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಪ್ರಕಾಶ್ 62 ಎಸೆತಗಳಲ್ಲಿ 26 ಬೌಂಡರಿಗಳನ್ನು ಒಳಗೊಂಡ 129 ರನ್ ಗಳಿಸಿ ಅಜೇಯರಾಗಿ ಉಳಿದರು. ವೆಂಕಟೇಶ್ವರ ರಾವ್ 42 ಎಸೆತಗಳಲ್ಲಿ 18 ಬೌಂಡರಿ ಹಾಗೂ ಎರಡು ಸಿಕ್ಸರ್ಒಳಗೊಂಡ 101 ರನ್ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.