ಐಪಿಎಲ್‌ಗಿಂತ ರಾಷ್ಟ್ರೀಯ ತಂಡದಲ್ಲಿ ಆಡಲು ಆದ್ಯತೆ ಕೊಡಿ: ಆಥರ್ಟನ್ ಸಲಹೆ ಲಂಡನ್ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಕ್ಕಿಂತ ರಾಷ್ಟ್ರೀಯ ತಂಡದಲ್ಲಿ ಆಡುವುದಕ್ಕೆ ಆದ್ಯತೆ ಕೊಡಬೇಕು. ಅಂತರರಾಷ್ಟ್ರೀಯ ಪಂದ್ಯಗಳನ್ನು ಹೆಚ್ಚು ಆಡಬೇಕು ಎಂದು ಇಂಗ್ಲೆಂಡ್ ತಂಡದ ಆಟಗಾರರಿಗೆ ಮಾಜಿ ನಾಯಕ ಮೈಕೆಲ್ ಆಥರ್ಟನ್ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್ 0–3ರಿಂದ ಸೋತಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಇದರಿಂದಾಗಿ ತಂಡದ ಪ್ರದರ್ಶನದ ಬಗ್ಗೆ ಇಂಗ್ಲೆಂಡ್ ಮಾಧ್ಯಮಗಳು ಮತ್ತು ಮಾಜಿ ಆಟಗಾರರು ಟೀಕಿಸಿದ್ದಾರೆ. ‘ಬಹುಮಾದರಿಗಳಲ್ಲಿ ಕ್ರಿಕೆಟ್ ಆಡುವ ಕೆಲವು ಆಟಗಾರರು ಏಳಂಕಿ ಮೊತ್ತದಲ್ಲಿ ವೇತನ ಪಡೆಯುತ್ತಿದ್ದಾರೆ. ಆದರೆ ಐಪಿಎಲ್ ನಡೆಯುವ ಎರಡು ತಿಂಗಳು ಅವಧಿಯಲ್ಲಿ ಅವರು ಇಸಿಬಿಯ ಹಿಡಿತದಿಂದ ಹೊರಗಿರುತ್ತಾರೆ. ಈ ವಿಷಯದಲ್ಲಿ ಮಂಡಳಿಯು ಬಿಗಿ ನಿಲುವು ತಳೆಯಬೇಕು. 12 ತಿಂಗಳ ಒಪ್ಪಂದವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಐಪಿಎಲ್ ಅಥವಾ ಇನ್ನಾವುದೋ ಫ್ರ್ಯಾಂಚೈಸಿ ಟೂರ್ನಿಯಲ್ಲಿ ಆಡಲು ನಿರಾಕ್ಷೇಪಣ ಪತ್ರ ಕೊಡುವಾಗ ಇಂಗ್ಲೆಂಡ್ ತಂಡದ ಹಿತಾಸಕ್ತಿಗೆ ಆದ್ಯತೆ ಕೊಡಬೇಕು’ ಎಂದು ‘ದ ಟೈಮ್ಸ್‌’ ಪತ್ರಿಕೆಯ ಅಂಕಣದಲ್ಲಿ ಆಥರ್ಟನ್ ಬರೆದಿದ್ದಾರೆ. 1993–2001ರ ಅವಧಿಯಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವವನ್ನು ಆಥರ್ಟನ್ ವಹಿಸಿದ್ದರು. 54 ಟೆಸ್ಟ್‌ಗಳನ್ನು ಆಡಿದ್ದರು. ‘ತಂಡದ ಆಯ್ಕೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವತ್ತ ಇಸಿಬಿ ಚಿತ್ತ ಹರಿಸಬೇಕು. ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಅವರಿಗೆ ಹೊರಹೋಗುವ ಬಾಗಿಲು ತೋರಿಸಲು ಇದು ಸರಿಯಾದ ಸಮಯ’ ಎಂದು ಬರೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.