ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೋವಿಡ್ ದೃಢ ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸದ್ಯಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರಿಗೆ ಕೋವಿಡ್–19 ಸೋಂಕು ತಗುಲಿರುವುದು ಸೋಮವಾರ ರಾತ್ರಿ ದೃಢಪಟ್ಟಿದೆ. ಸದ್ಯ ಅವರನ್ನು ನಗರದ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಓಮೈಕ್ರಾನ್‌ ಸೋಂಕು ತಗುಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗಂಗೂಲಿ ಅವರು ಈ ವರ್ಷ ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜನವರಿಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲ ಸಲ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯಲ್ಲಿ ದೈಹಿಕ ಕಸರತ್ತು ನಡೆಸುತ್ತಿದ್ದಾಗ ಅವರಿಗೆ ಲಘು ಹೃದಯಾಘಾತವಾಗಿತ್ತು. ಇದನ್ನೂ ಓದಿ:ಎರಡನೇ ಬಾರಿಗೆ ಯಶಸ್ವಿ ಆ್ಯಂಜಿಯೊಪ್ಲಾಸ್ಟಿಗೊಳಗಾದ ಸೌರವ್ ಗಂಗೂಲಿ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್‌ಗಳು ಕಾಣಿಸಿಕೊಂಡಿದ್ದರಿಂದ ಅವರಿಗೆ ಆ್ಯಂಜಿಯೊಪ್ಲಾಸ್ಟಿ ನಡೆಸಿ ಒಂದು ಕಡೆ ಸ್ಟಂಟ್ ಆಳವಡಿಸಲಾಗಿತ್ತು. 20 ದಿನಗಳ ಬಳಿಕ ಮತ್ತೊಮ್ಮೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಜನವರಿ 28ರಂದು ಮತ್ತೊಮ್ಮೆಆ್ಯಂಜಿಯೊಪ್ಲಾಸ್ಟಿ ಮಾಡಿ ಇನ್ನೊಂದು ಸ್ಟಂಟ್ ಅಳವಡಿಸಲಾಗಿತ್ತು. ಸಂಪೂರ್ಣ ಗುಣಮುಖರಾದ ಬಳಿಕ, ಎರಡು ಡೋಸ್‌ ಲಸಿಕೆ ಪಡೆದುಕೊಂಡುಮಾರ್ಚ್‌ನಲ್ಲಿ ಕರ್ತವ್ಯಕ್ಕೆ ಮರಳಿದ್ದರು. ಗಂಗೂಲಿ ಸಹೋದರ ಸ್ನೇಹಶಿಶ್‌ ಗಂಗೂಲಿ ಅವರಿಗೂ ಈ ವರ್ಷದ ಆರಂಭದಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇದನ್ನೂ ಓದಿ:ಸೌರವ್‌ ಗಂಗೂಲಿ ಅಣ್ಣನಿಗೆ ಕೋವಿಡ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.