ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಗುರಿ: ಡೇವಿಡ್ ವಾರ್ನರ್ ಮೆಲ್ಬರ್ನ್(ಪಿಟಿಐ): ತಾವು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಮುನ್ನಇಂಗ್ಲೆಂಡ್‌ನಲ್ಲಿ 2023ರಲ್ಲಿ ನಡೆಯಲಿರುವ ಆ್ಯಷಸ್ ಸರಣಿ ಟ್ರೋಫಿ ಮತ್ತು ಭಾರತ ತಂಡದ ಎದುರು ಭಾರತದಲ್ಲಿಯೇ ಜಯಿಸುವ ಗುರಿ ಇದೆ ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟರ್ ಡೇವಿಡ್ ವಾರ್ನರ್ ಹೇಳಿದರು. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಎದುರಿನ ಆ್ಯಷಸ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಜಯಿಸಿದ ನಂತರ ಅವರು ಮಾತನಾಡಿದರು. ವಾರ್ನರ್ ಈಚೆಗೆ ಯುಎಇಯಲ್ಲಿ ನಡೆದಿದ್ದ ವಿಶ್ವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಆಟಗಾರ ಗೌರವ ಗಳಿಸಿದ್ದರು. ‘ಭಾರತವನ್ನು ಅದರ ತವರಿನಲ್ಲಿ ಇನ್ನೂ ಸೋಲಿಸಿಲ್ಲ. ಅಂತಹದೊಂದು ಸಾಧನೆ ಮಾಡಲು ಕಾತುರನಾಗಿದ್ದೇನೆ. ಇಂಗ್ಲೆಂಡ್ ವಿರುದ್ಧವೂ ಅಂತಹ ಸಾಧನೆ ಮಾಡುವ ಆಸೆಯಿದೆ‘ ಎಂದರು. ‘ಇಂಗ್ಲೆಂಡ್ ವೇಗಿ ಜೇಮ್ಸ್‌ ಆ್ಯಂಡರ್ಸನ್ ಯುವ ಆಟಗಾರರಿಗೆ ಮಾದರಿಯಾಗುತ್ತಾರೆ. ವಯಸ್ಸು ಕೇವ ಒಂದು ಸಂಖ್ಯೆಯಷ್ಟೇ. ಅವರ ಶ್ರದ್ಧೆ, ಬದ್ಧತೆಗಳು ಅನುಕರಣೀಯ. ಅವರು ಈಗಲೂ ಆಡುತ್ತಿರುವ ರೀತಿ ಅನನ್ಯವಾದುದು’ ಎಂದು 35 ವರ್ಷದ ವಾರ್ನರ್ ಹೇಳಿದರು. ‘ಹೊಸ ವರ್ಷದಲ್ಲಿ ಹೆಚ್ಚು ರನ್ ಗಳಿಸುವ ವಿಶ್ವಾಸವಿದೆ. ಈಗ ಉತ್ತಮ ಲಯದಲ್ಲಿದ್ದೇನೆ. ಆದ್ದರಿಂದ ಉತ್ತಮವಾಗಿ ಆಡುವ ಗುರಿ ಇದೆ’ ಎಂದರು. ಪ್ರಸ್ತುತ ನಡೆಯುತ್ತಿರುವಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ 3–0ಯಿಂದ ಮುನ್ನಡೆ ಸಾಧಿಸಿದೆ. ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಇವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.